
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಂಗಾರಿನ ಆಗಮನಕ್ಕೆ ಆಸೆಗಣ್ಣಲ್ಲಿ ಆಗಸ ನೋಡುತ್ತ ಕುಳಿತ ರೈತರಿಗೆ ಹವಾಮಾನ ಇಲಾಖೆ ನಿರಾಶಾದಾಯಕ ಸುದ್ದಿ ನೀಡಿದೆ.
“ಈ ಬಾರಿ ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಮುಂಗಾರು ಸಾಮಾನ್ಯವಾಗಿರಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಎಂಡಿಯ ಪರಿಸರ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಿ. ಶಿವಾನಂದ ಪೈ, “ಜೂನ್ ತಿಂಗಳಲ್ಲಿ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿ, ವಾಯವ್ಯ ಭಾರತ, ಉತ್ತರ ಭಾರತದ ಕೆಲ ಪ್ರದೇಶಗಳನ್ನು ಹೊರತುಪಡಿಸಿ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗಲಿದೆ” ಎಂದು ತಿಳಿಸಿದ್ದಾರೆ.
“ದಕ್ಷಿಣ ಅಮೆರಿಕ ಸನಿಹದ ಪೆಸಿಫಿಕ್ ಸಾಗರದಲ್ಲಿ ನೀರು ಬಿಸಿ ಆಗುವ ಮೂಲಕ ಮುಂಗಾರು ಮಾರುತವನ್ನು ದುರ್ಬಲಗೊಳಿಸುವ ಪ್ರಕ್ರಿಯೆಯಾದ ‘ಎಲ್ ನಿನೋ’ ಪ್ರಭಾವದ ಕಾರಣ ಫೆಸಿಫಿಕ್ ಸಾಗರದ ಸಮಭಾಜಕ ವೃತ್ತದ ಪ್ರದೇಶದಲ್ಲಿನ ತಾಪಮಾನ ಹೆಚ್ಚಿದ್ದರೂ ನೈಋತ್ಯ ಮುಂಗಾರು ಸಹ ಸಾಮಾನ್ಯವಾಗಿರಲಿದೆ. ಸರಾಸರಿ ಮಳೆ ಪ್ರಮಾಣ ಶೇ. 94 ರಿಂದ 106 ರಷ್ಟು ಇರಲಿದೆ” ಎಂದು ಪೈ ತಿಳಿಸಿದರು.