Kannada NewsLatest

ಸತೀಶ್ ಜಾರಕಿಹೊಳಿ ಪರ ಯುವ ಕಾಂಗ್ರೆಸ್ ರಣಕಹಳೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಮತಬೇಟೆಗೆ ಅಖಾಡಕ್ಕೆ ಇಳಿದಿದ್ದು, ರಕ್ಷಾ ರಾಮಯ್ಯ ನೇತೃತ್ವದಲ್ಲಿ ಮೊದಗಾ ಗ್ರಾಮದಲ್ಲಿ ಬೈಕ್ ರ್ಯಾಲಿ ಕೈಗೊಳ್ಳುವ ಮುಖೇನ ಸತೀಶ್ ಜಾರಕಿಹೊಳಿ ಪರ ಮತ ಪ್ರಚಾರ ನಡೆಸಲಾಯಿತು.

ಈ ವೇಳೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯನವರು ಯುವ ಕಾಂಗ್ರೆಸ್ ಶಕ್ತಿಯಿಂದಾಗಿಯೇ ಭಾರತವು ಇಂದು ಇಡೀ ವಿಶ್ವದ ಗಮನ ಸೆಳೆದಿದೆ. ದೇಶದ ಯುವಕರು ಮಹಾನ್‌ ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮ ಬೇಕು. ದೇಶದ ಪ್ರಗತಿಗಾಗಿ ಯುವಕರ ಪಾಲುಗಾರಿಕೆ ಅತ್ಯಮೂಲ್ಯವಾಗಿದ್ದು, ಯುವಶಕ್ತಿಯ ಪಡೆಯ ಸಹಕಾರದೊಂದಿಗೆ ಸತೀಶ್ ಜಾರಕಿಹೊಳಿಯವರನ್ನು ಉಪ ಚುನಾವಣೆಯಲ್ಲಿ ಯುವಕರ ಧ್ವನಿಯಾಗಿ ಸಂಸತ್ತಿಗೆ ಕಳುಹಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ದೇಶದ ಬೆನ್ನೆಲುಬಾದ ರೈತರು ಇಂದು ಸಂಕಷ್ಟಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಳೆದ ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ ಆದರೆ ಸರ್ಕಾರ ಅನ್ನದಾತನ ಸಂಕಷ್ಟವನ್ನು ಆಲಿಸುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಮನೆಮಠ ಕಳೆದುಕೊಂಡು ಕಣ್ಣೀರುಡುತ್ತಿದ್ದರೂ ಕೇಂದ್ರವಾಗಲಿ, ರಾಜ್ಯಸರ್ಕಾರವಾಗಲಿ ಗಮನ ಹರಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ಕೊರೊನಾ ಮಾಹಾಮಾರಿಯಿಂದಾಗಿ ಜನರು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟ ಹೆಚ್ಚುತ್ತಿದೆ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ದಿನಬಳಕೆ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಪ್ರತಿವೊಂದು ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ಪ್ರಧಾನಿ ಮೋದಿಯವರ ಉದೋಗ ಸೃಷ್ಟಿ ಭರವಸೆ, ಖಾತೆಗಳಿಗೆ ಹಣ ಹಂಚಿಕೆ ಗಗನ ಕುಸುಮವಾಗಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಲೇ ಕಾಲಹರಣ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸಬೇಕಿದೆ. ಈ ನಿಟ್ಟಿನಲ್ಲಿ ರೈತ ಸಮುದಾಯದ, ಯುವಜನತೆಯ, ಬಡವರ, ಜನಸಾಮಾನ್ಯರ ದ್ವನಿಯಾಗಿ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಯವರನ್ನು ಗೆಲ್ಲಿಸುವ ಮೂಲಕ ಕೇಂದ್ರದ ಜನವಿರೋಧಿ ಧೋರಣೆಗೆ ಪಾಠ ಕಲಿಸಬೇಕಿದೆ. ಇದಕ್ಕೆ ಬೆಳಗಾವಿ ಲೋಕಸಭಾ ಉಪಚುನಾವಣೆ ನಾಂದಿಹಾಡಬೇಕಿದೆ ಎಂದು ಕರೆ ನೀಡಿದರು.

ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾದದ್ದು, ಇಂದಿನ ಯುವಕರೇ ನಾಳಿನ ನಾಯಕರು. ಹಾಗಾಗಿ ನಿಮ್ಮ ಅಮೂಲ್ಯಮತಗಳನ್ನು ಸತೀಶ್ ಜಾರಕಿಹೊಳಿ ಅವರಿಗೆ ನೀಡುವ ಮೂಲಕ ಸಂಸತ್ತಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿಯವರು ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ದೇಶದ ಶಕ್ತಿಯಾದ ಯುವ ಶಕ್ತಿಯ ಸದ್ಬಳಕೆಯು ಅವಶ್ಯಕವಾಗಿದೆ, ಯುವಕರು ದೇಶವನ್ನು ಕಟ್ಟುವ ಶಕ್ತಿಯನ್ನು ಹೊಂದಿದ್ದು, ದೇಶದ ಬದಲಾವಣೆ ಆಗುವುದಾದರೆ ಅದು ಯುವಕರಿಂದ ಮಾತ್ರ ಸಾಧ್ಯ ಎನ್ನುತ್ತಾ ನಮ್ಮ ಶಕ್ತಿಯನ್ನು ಮೀರಿ ಈ ಉಪ ಚುಣಾವಣೆಯಲ್ಲಿ ಹೋರಾಡೋಣ ಎಂದು ಪಣ ತೊಟ್ಟರು. ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿದಂತೆ ಹಲವರು ಮಾತನಾಡಿದರು.
ಬಿಜೆಪಿ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೇಸ್ಸಿಗಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button