Kannada NewsLatest

ಮಹಿಳೆಯರ ಕಲ್ಯಾಣ ಹಾಗೂ ಸುರಕ್ಷತೆ ಬಿಜೆಪಿಯಿಂದ ಮಾತ್ರ ಸಾಧ್ಯ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿದ್ದು, ಸಾಕಷ್ಟು ಯೋಜನೆಗಳನ್ನು ಮಹಿಳೆಯರ ಅಭ್ಯುದಯಕ್ಕಾಗಿ ರೂಪಿಸಿವೆ. ಸಮಗ್ರ ಅಭಿವೃದ್ದಿ ದೃಷ್ಟಿಕೋನದಿಂದ ಬಿಜೆಪಿಗೆ ಆಶೀರ್ವದಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿ.ಎಂ ಯಡಿಯೂರಪ್ಪನವರ ಕೈ ಬಲಪಡಿಸಿ ಅವರಿಗೆ ಶಕ್ತಿ ತುಂಬುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಹೊರವಲಯದ ಪ್ರಭಾ ಶುಗರ್ಸ್ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪ್ರಚಾರಾರ್ಥ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಗಳ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಕಲ್ಯಾಣ ಹಾಗೂ ಸುರಕ್ಷತೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ತರಲು ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಭಾಗ್ಯಲಕ್ಷಿ ಯೋಜನೆ, ಸ್ವಸಹಾಯ ಸಂಘಗಳಿಗೆ ಸಹಾಯಧನ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ, ದೇಶದ 9 ಕೋಟಿ ಕುಟುಂಬಗಳಿಗೆ ಉಜ್ವಲಾ ಗ್ಯಾಸ್, ಜನಧನ, ಕಿಸಾನ ಸಮ್ಮಾನ, ಆಯುಷ್ಮಾನ ಭಾರತ ಯೋಜನೆ ಸೇರಿದಂತೆ ಜನಪರ, ರೈತಪರ, ಮಹಿಳಾ ಪರ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲೂ ನಮ್ಮ ಹೆಮ್ಮೆಯ ಸಿಎಮ್ ಬಿ.ಎಸ್.ಯಡಿಯೂರಪ್ಪನವರು ವಿಶ್ವ ಮಹಿಳಾ ದಿನಾಚರಣೆ ದಿನದಂದು ಬಜೆಟ ಮಂಡಿಸಿ 37,188 ಕೋಟಿ ರೂಗಳನ್ನು ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆಂದು ತಿಳಿಸಿದರು.

ಏ-17 ರಂದು ನಡೆಯುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರು ನಿಮ್ಮ ಮನೆ ಮಗಳಾಗಿದ್ದು, ತಮ್ಮ ಅಮೂಲ್ಯವಾದ ಮತದ ಉಡಿ ತುಂಬಿಸಿ ಹಾರೈಸಬೇಕು. ಪ್ರತಿ ಮನೆ-ಮನೆಗೆ ತೆರಳಿ ಮಹಿಳೆಯರು ಮತಯಾಚಿಸಿ ಲೋಕಸಭೆಗೆ ಆಯ್ಕೆ ಮಾಡುವಂತೆ ಶಶಿಕಲಾ ಜೊಲ್ಲೆ ಕೋರಿದರು.

ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ ಕತ್ತಿ ಮಾತನಾಡಿ, ಲೋಕಸಭಾ ಕ್ಷೇತ್ರಾಧ್ಯಂತ ಬಿಜೆಪಿ ಅಲೆ ಇದ್ದು, ಈ ಚುನಾವಣೆಯಲ್ಲಿ ಮಂಗಳಾ ಅವರು 5ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ದಿ. ಸುರೇಶ ಅಂಗಡಿ ಅವರ ಕೈಗೊಂಡಿದ್ದ ಜನಪರ ಕಾರ್ಯಗಳು ಮಂಗಳಾ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ತಮ್ಮ ಮನೆಯ ಮುಂದೆ ಕಮಲ ಗುರ್ತಿನ ರಂಗೋಲಿ ಹಾಕಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಮಂಗಳಾ ಗೆಲುವಿಗೆ ಪ್ರತಿಯೊಬ್ಬರು ಶಕ್ತಿ ಮೀರಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶಿಲ್ಪಾ ಸುವರ್ಣಾ, ಪ್ರೇಮಾ ಭಂಡಾರಿ, ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಘಟಕದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರಾಜೇಶ್ವರಿ ವಡೇಯರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಜಿ.ಪಂ ಸದಸ್ಯೆ ವಾಸಂತಿ ತೇರದಾಳ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ, ನ್ಯಾಯವಾದಿ ಶಿಲ್ಪಾ ಗೋಡಿಗೌಡರ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷೆ ರೇಖಾ ಚಿನ್ನಾಕಟ್ಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಶ್ರೀದೇವಿ ತಡಕೋಡ ನಿರೂಪಿಸಿದರು.

ಪ್ರಧಾನಿ ಮೋದಿ, ಸಿಎಂ ಬಿಎಸ್ ವೈ ಕೈಬಲಪಡಿಸಲು ಮಂಗಲಾ ಅಂಗಡಿಗೆ ಮತ ನೀಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button