ಪ್ರಗತಿವಾಹಿನಿ ಸುದ್ದಿ; ಬೆಂಗಳೂರು/ ಬೆಳಗಾವಿ: ರಾಜ್ಯದಲ್ಲಿ ಒಂದೆಡೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದರೆ, ಇನ್ನೊಂದೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 2 ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕೋಡಿಯ ಬೋಜ್ ಕಾರದಗಾ ಗ್ರಾಮದ ನಡುವಿನ ಕೆಳ ಹಂತದ ಸೇತುವೆ ಹಾಗೂ ಕುನ್ನೂರ- ಬಾರವಾಡ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದೆ. ಸೇತುವೆಯ 2 ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಆತಂಕ ಮನೆ ಮಾಡಿದೆ.
ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅರಬ್ಬೀ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಅಬ್ಬರಿಸುತ್ತಿದ್ದು, ಮಂಗಳೂರಿನ ಹೊರವಲಯದ ಸೋಮೇಶ್ವರ ಪ್ರದೇಶದ ಮನೆಯೊಂದು ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದೆ. ಬೃಹತ್ ಗಾತ್ರದ ಅಲೆಗಳ ಹೊಡೆತಕ್ಕೆ ಮನೆ ನಾಮಾವಶೇಷವಾಗಿದ್ದು, ಮತ್ತಷ್ಟು ಮನೆಗಳು ಸಮುದ್ರದ ಪಾಲಾಗುವ ಆತಂಕ ಎದುರಾಗಿದೆ.
ಉಡುಪಿಯಲ್ಲಿ ಕಳೆದ 1 ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 114 ಮಿಲಿ. ಮೀ ಮಳೆ ದಾಖಲಾಗಿದೆ. ವಾರಾಂತ್ಯದವರೆಗೆ ಭಾರೀ ಮಳೆ ಸಾಧ್ಯತೆಯಿದ್ದು, ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಬಡಾವಣೆಯ ಮನೆಯೊಂದರ ಕೆಳಗೆ ಗುಡ್ಡ ಕುಸಿದಿದ್ದು, ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಇನಷ್ಟು ಗುಡ್ಡ ಕುಸಿಯೋ ಭೀತಿ ಹಿನ್ನೆಲೆಯಲ್ಲಿ ಮೂರು ಕುಟುಂಬಗಳನ್ನು ಎನ್‍ಡಿಆರ್‍ಎಫ್ ತಂಡ ಸ್ಥಳಾಂತರಿಸಿದೆ.
ಮಹಾರಾಷ್ಟ್ರದಲ್ಲಿ ಮಳೆ: ನದಿ ತೀರದ ಜನತೆಯಲ್ಲಿ ಆತಂಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ