*ತಂದೆಯ ಶವ ಬಿಸಾಕಿ ಎಂದ ಮಗಳು; ಹಾದಿ ಬದಿಯ ಶವವಾದ ಕೊಟ್ಯಧಿಪತಿ; ಪೊಲೀಸ್ ಸಿಬ್ಬಂದಿಯೇ ಕಣ್ಣೀರಾದ ಘಟನೆ*
ತಂದೆ ಸಾವನ್ನಪ್ಪಿದರೂ ಬಂದು ನೋಡದ ಮಕ್ಕಳು; ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪೊಲೀಸರು
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಇದು ಕಲ್ಲು ಹೃದಯದವರನ್ನೂ ಕರಗಿಸುವಂತಹ ನಿಜ ಘಟನೆ. ಸ್ವತಃ ಪೊಲೀಸ್ ಸಿಬ್ಬಂದಿ ಕೂಡ ಕಣ್ಣೀರಾದ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.
ಮಕ್ಕಳಿಗೆ ಬೆಳೆಸಿ, ವಿದೇಶದಲ್ಲಿ ಉದ್ಯೋಗ ಮಾಡುವಷ್ಟು ಶಿಕ್ಷಣ ಕೊಡಿಸಿ, ಬದುಕಿನ ಅಂತ್ಯದಲ್ಲಿ ಹಾದಿ ಬದಿಯ ಹೆಣವಾದ ವ್ಯಕ್ತಿಯ ನೈಜ ಘಟನೆ ಇದು.
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ ನಲ್ಲಿ ಯಾರೋ ಸುಮಾರು 72 ವರ್ಷದ ವೃದ್ಧನನ್ನು ತಂದು ಬಿಟ್ಟು ಪರಾರಿಯಾಗಿದ್ದಾರೆ. ಈ ಮಾಹಿತಿ ತಿಳಿದು ಚಿಕ್ಕೋಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಮೂಲಚಂದ್ರ ಶರ್ಮಾ ಎನ್ನುವ ಪುಣಾ ಮೂಲದ ವ್ಯಕ್ತಿ ಇಂಗ್ಲಿಷ್, ಹಿಂದಿ , ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಕರಾರುವಕ್ಕಾಗಿ ಕಡಕ್ಕಾಗಿ ಮಾತನಾಡುತ್ತಾ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ. ಅವನನ್ನು ಪೊಲೀಸರು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಆಗ ಅವರು ಯಾಕೆ ಸರ್ ನಾನು ಅಂತಿಂಥ ವ್ಯಕ್ತಿಯಲ್ಲ ನನ್ನ ಮಗಳು ಕೆನಡಾದಲ್ಲಿ ಹಾಗೂ ಮಗ ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಮತ್ತು ನಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಇದ್ದೀನಿ. ನೀವು ಇಲ್ಲಿಗೇಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಿ ಎಂದು ಕೇಳಿದರು.
ಚಿಕ್ಕೋಡಿ ಪೊಲೀಸರು ಲಾಡ್ಜ್ ಮಾಲೀಕನಿಂದ ವಿಷಯ ತಿಳಿದಾಗ .. ಸರ್ ಯಾರೋ ಒಬ್ಬ ವ್ಯಕ್ತಿ ಕಾರ್ ತೆಗೆದುಕೊಂಡು ಇವರನ್ನು ನಾಗರಮುನ್ನೊಳಿ ಕುಂಬಾರ ಆಸ್ಪತ್ರೆಗೆ ಪಾರ್ಶ್ವವಾಯು ಚಿಕಿತ್ಸೆಗೆ ಕರೆದುಕೊಂಡು ಬಂದು ಇಲ್ಲಿ ತಂದಿರುತ್ತಾರೆ. ಆ ವ್ಯಕ್ತಿ ಅವರ ಸಂಬಂಧಿಕ ಎಂದು ನಾವು ತಿಳಿದೆವು. ಆದರೆ ಅವನು ಗುತ್ತಿಗೆ ಆಧಾರದ ಮೇಲೆ ಅವನನ್ನು ಆರೈಕೆ ಮಾಡುವ ಕೆಲಸಗಾರ, ನಿನ್ನೆ ರಾತ್ರಿ ಅವನ ಗುತ್ತಿಗೆ ಮುಗಿದು ಹೋಗಿದು ಅವರನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ. ನಾವು ಎಲ್ಲ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಯಾವುದೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದರು.
ಪೊಲೀಸರು ಕೂಡ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ನಂತರ ಆ ವೃದ್ಧನನ್ನು ಸಮಾಧಾನ ಪಡಿಸಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು….. ಹೀಗಿರುವಾಗ ಟಪಾಲ್ ಕರ್ತವ್ಯಕ್ಕೆ ಬೆಳಗಾವಿಗೆ ಹೋಗುವ ಸಿಬ್ಬಂದಿ 2-3 ದಿನಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದರು…. ಆದರೂ ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಿತ್ತು .
ಹೀಗಿರುವಾಗ ನಿನ್ನೆ ದಿನ ಠಾಣೆಗೆ ಆ ವ್ಯಕ್ತಿ ಮೃತನಾಗಿದ್ದಾನೆ ಎಂದು ಮರಣ ಸೂಚನೆ ಪತ್ರ ಬಂದಿತ್ತು… ನಾವು ಮತ್ತೆ ಅವರ ಮಗ ಮತ್ತು ಮಗಳಿಗೆ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿ ಕೊನೆಗೆ ಅವರ ಮಗಳನ್ನು ಸಂಪರ್ಕಿಸಿದಾಗ ವಾಟ್ಸಪ್ ಕರೆ ಸ್ವೀಕರಿಸಿ.. ಅವರು ನಮ್ಮ ತಂದೆ ಆಗ ಇದ್ದರು. ಇವಾಗ ಇಲ್ಲ. ಅವರಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಮ್ಮ ಕುಟುಂಬದ ವಿಷಯ ನಿಮಗೆ ಅರ್ಥ ಆಗಲ್ಲ. ನಿಮಗೆ ನಾವು ಚಿಕಿತ್ಸೆ ಕೊಡಿಸಿ ಎಂದು ಹೇಳಿಲ್ಲ. ನಾವು ನೆಮ್ಮದಿಯಿಂದ ಇದ್ದೀವಿ. ಸುಮ್ಮನೆ ನಮಗೆ ತೊಂದರೆ ಕೋಡಬೇಡಿ.. ನಿಮಗೆ ಮುಂದಿನ ಕಾರ್ಯ ಮಾಡೋಕೆ ಆದರೆ ಮಾಡಿ, ಇಲ್ಲ ಹೆಣ ಬಿಸಾಕಿ ಎಂದಳು… ಆಗ ಪೊಲೀಸ್ ಸಿಬ್ಬಂದಿಗಳೂ ದಂಗಾಗಿದ್ದಾರೆ. ಮನುಷ್ಯತ್ವವೇ ಇಲ್ಲವೇ…? ಎಂದು ಕಣ್ಣೀರಾಗಿದ್ದಾರೆ.
ಠಾಣೆಯ ಒಬ್ಬ ಎಎಸ್ಐ ಹಾಗೂ ಸಿಬ್ಬಂದಿ ಜನರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಆ ವೃದ್ಧನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ನಾಗರಮುನ್ನೊಳಿ ಗ್ರಾಮಕ್ಕೆ ತಂದು ನಾಗರಮುನ್ನೊಳಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರುಗಳ ಸಹಾಯದಿಂದ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ….
ಆಗ ಅಲ್ಲಿ ಇದ್ದ ಎಎಸ್ಐ ತಮ್ಮ ಒದ್ದೆಯಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ, ನೋಡಿ ಸರ್ ಇವರು ಬದುಕಿದ್ದಾಗ ಕೋಟ್ಯಾಧೀಶರು ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡಿಸಿ ಹೊರದೇಶಕ್ಕೆ ಕಳುಹಿಸಿದ್ದಾರೆ. ಆದರೆ ಮಕ್ಕಳಿಗೆ ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ನೀಡಿಲ್ಲ….. ಆ ನೊಂದ ಜೀವ ಕೊನೆಯ ದಿನಗಳಲ್ಲಿ ತನ್ನ ಮಕ್ಕಳನ್ನು ನೋಡುವುದಕ್ಕಾಗಿ ಎಷ್ಟು ಕಾದಿರಬೇಕು, ಎಷ್ಟು ನೊಂದಿರಬೇಕು ಎಂದಾಗ ಅಲ್ಲಿದ್ಜವರ ಕಣ್ಣುಗಳಿಂದ ಕಣ್ಣೀರು ಹನಿಗಳು ಜಾರ ತೊಡಗಿದ್ದವು ….
ನಾವು ಎಲ್ಲ ಪಾಲಕರಿಗೆ ಮಾಡುವ ಒಂದು ಮನವಿ ಏನೆಂದರೆ, ನಾವು ನಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಲಿ ಅಂತಾ CBSE, ICSE ಹುಡುಕಿ ಶಾಲೆಗೆ ಹಾಕುತ್ತೇವೆ. ಅವರನ್ನು ಒಂದು ಒಳ್ಳೆಯ ಸ್ಥಾನಮಾನಕ್ಕೆ ತರಬೇಕು ಎಂದು ಅವರಿಗೆ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವುದನ್ನು ಮರೆತು ಕೊನೆಗೆ ಅವರ ತಂದೆ ತಾಯಿ ಆರೈಕೆ ಪೋಷಣೆ ಬಿಡಿ ಅವರ ಅಂತ್ಯಸಂಸ್ಕಾರಕ್ಕೂ ಬರಲಾರದಷ್ಟು ಅವರನ್ನು ಅನಾಗರಿಕರನ್ನಾಗಿ ಮಾಡುತ್ತಿದ್ದೇವೆ. ಆದ್ದರಿಂದ ಅವರಿಗೆ ಶಿಕ್ಷಣ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದು ಚಿಕ್ಕೋಡಿ ಪಿಎಸ್ ಐ ಬಸಗೌಡ ಕಳಕಳಿಯ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ