Kannada NewsLatest

ಚಿಗುರು ಕಾರ್ಯಕ್ರಮದಲ್ಲಿ ಚಿಣ್ಣರ ಪ್ರತಿಭೆ ಅನಾವರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶದಲ್ಲಿ ಒಗ್ಗಟ್ಟಿಗೆ ಕಾರಣ ನಮ್ಮ ಭಾರತೀಯ ಸಂಸ್ಕೃತಿ. ಇಂತಹ ವೈಶಿಷ್ಟ್ಯವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಶನಿವಾರ(ಡಿ.26) ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಚಿಣ್ಣರ ಹಬ್ಬ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದ ಅನೇಕ ದೇಶಗಳು ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುತ್ತವೆ. ಆದ್ದರಿಂದ ನಮ್ಮ ದೇಶದ ಅಂತಹ ಉತ್ತಮ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿ, ಬೆಳೆಸಬೇಕಿದೆ ಎಂದು ಕರೆ ನೀಡಿದರು.

ಬರೀ ಅಂಕಗಳನ್ನು ಗಳಿಸುವುದರಿಂದ ಪ್ರಜ್ಞಾವಂತ ನಾಗರಿಕರಾಗುತ್ತಾರೆ ಎಂಬುದು ತಪ್ಪು ಕಲ್ಪನೆಯಾಗಿದೆ. ಆದ್ದರಿಂದ ಶಿಕ್ಷಣದ ಜತೆ ಜತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವುದು ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದು ಶಾಸಕ ಬೆನಕೆ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಲಾಖೆಯ ವತಿಯಿಂದ ಚಿಗುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಗತ್ತೇ ಒಂದು ಸುಂದರವಾದ ತೋಟವಾದರೆ ಮಕ್ಕಳು ಅದರಲ್ಲಿರುವ ಪುಷ್ಪಗಳಿದ್ದಂತೆ. ಪುಷ್ಪಗಳು ಅರಳಬೇಕಾದರೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಬೇಕಿದೆ ಎಂದರು.

ತಾಲ್ಲೂಕು ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀರಂಗ ಜೋಶಿ, ಪತ್ರಕರ್ತ ಮಹೇಶ್ ವಿಜಾಪುರ, ವೇಣುಧ್ವನಿ ಬಾನುಲಿ ಕೇಂದ್ರದ ನಿರೂಪಕಿ ಸುನಿತಾ‌ ದೇಸಾಯಿ, ಸತ್ಯನಾರಾಯಣ, ರೋಹಿಣಿ ಗಂಗಾಧರಯ್ಯ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಾ ಸುನೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳು ವಿವಿಧ ಪ್ರಕಾರದ ನೃತ್ಯ ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಾತ್ರರಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button