*ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಿಂದ ದೇಶದ ರಾಜಕೀಯ, ಕಾಂಗ್ರೆಸ್ ಹೋರಾಟಕ್ಕೆ ಹೊಸ ತಿರುವು: ಕೆ.ಸಿ ವೇಣುಗೋಪಾಲ್*
ಪ್ರಗತಿವಾಹಿನಿ ಸುದ್ದಿ: “ಬೆಳಗಾವಿಯಲ್ಲಿ ಇದೇ ತಿಂಗಳು 26ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಿಂದ ದೇಶದ ರಾಜಕೀಯ, ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ಸಿಗಲಿದೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ಅವರು ತಿಳಿಸಿದರು.
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಂಗಳವಾರ ನಡೆದ ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಅಜಯ್ ಮಾಕೇನ್, ಸಚಿವರಾದ ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರ ಮುಖಂಡರು ಹಾಜರಿದ್ದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆ.ಸಿ ವೇಣುಗೋಪಾಲ್ ಅವರು, “ಮಹಾತ್ಮಾ ಗಾಂಧಿಜಿ ಅವರು ಕೇವಲ ಒಂದು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈ ಅಧಿಕಾರವನ್ನು ಅವರು 1924ರ ಡಿ.26ರಂದು ಬೆಳಗಾವಿ ಅಧಿವೇಶನದಲ್ಲಿ ಸ್ವೀಕರಿಸಿದ್ದರು. ಆಗ ನಾವು 2024ರ ಡಿಸೆಂಬರ್ ತಿಂಗಳಲ್ಲಿದ್ದೇವೆ. ನೂರು ವರ್ಷಗಳು ತುಂಬಿರುವ ಈ ಕ್ಷಣವನ್ನು ಸಂಭ್ರಮಿಸಲು ಪ್ರತಿ ಕಾಂಗ್ರೆಸಿಗನಿಗೆ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಅನೇಕ ಸಂದೇಶಗಳನ್ನು ಜನರಿಗೆ ನೀಡಿತ್ತು” ಎಂದು ತಿಳಿಸಿದರು.
“ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮಾ ಗಾಂಧಿ ಅವರ ಪರಂಪರೆ ಪ್ರತಿಯೊಬ್ಬ ಕಾಂಗ್ರೆಸಿಗನ ಮನದಲ್ಲಿ ಹೆಮ್ಮೆ ತಂದಿದೆ. ಇಂದು ದೇಶದ ಪರಿಸ್ಥಿತಿ ನಮಗೆಲ್ಲ ಗೊತ್ತಿದೆ. ಮಹಾತ್ಮಾ ಗಾಂಧಿ ಅಹಿಂಸೆ ಬಗ್ಗೆ ಪ್ರತಿಪಾದನೆ ಮಾಡಿದರು. ಬ್ರಿಟೀಷರ ವಿರುದ್ಧ ಅಹಿಂಸೆ ಮಾರ್ಗದಲ್ಲಿ ಹೋರಾಡಿ ಪ್ರೀತಿ, ಸಮಾನತೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಎಲ್ಲವು ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಾಶವಾಗುತ್ತಿವೆ. ಈಗ ದೇಶದಲ್ಲಿ ಸಮಾನತೆ ಇಲ್ಲ. ಶ್ರೀಮಂತರು ಶ್ರೀಮಂತರಾಗಿ, ಬಡವರು ಕಡು ಬಡವರಾಗುತ್ತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಹಿತಾಸಕ್ತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ” ಎಂದು ಟೀಕಿಸಿದರು.
“ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಎಲ್ಲಾ ಆಸ್ತಿಗಳು ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿದೆ. ಹೀಗಾಗಿ ಸಮಾನತೆ ಎಂಬುದೇ ದೇಶದಲ್ಲಿ ಇಲ್ಲವಾಗಿದೆ. ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಸೇರಿದಂತೆ ಸಾಮಾನ್ಯ ವರ್ಗದ ಬಡವರಿಗೆ ರಕ್ಷಣೆ ಸಿಗಬೇಕು ಎಂಬ ಉದ್ದೇಶದಿಂದ ನಾವು ಜಾತಿಗಣತಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಗಾಂಧಿಜಿ ಅವರು ಹೇಳಿದ್ದ ಸಮಾನತೆ ಬಗ್ಗೆ ನಾವು ಮಾತನಾಡುತ್ತಿದ್ದೇವೆ” ಎಂದು ತಿಳಿಸಿದರು.
“ಬಿಜೆಪಿ ದೇಶದೆಲ್ಲೆಡೆ ದ್ವೇಷದ ಮಾರುಕಟ್ಟೆ ತೆರೆದಿದ್ದು, ಪ್ರತಿ ನಿತ್ಯ, ಧರ್ಮದ ಹೆಸರಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಅದೊಂದೆ ಅವರ ಅಜೆಂಡಾ. ಈಗ ಅವರು ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಹೈಜಾಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಸಭೆ ದೇಶದ ರಾಜಕೀಯ ಹಾಗೂ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ನೀಡಲಿದೆ. ಬೆಳಗಾವಿಯಲ್ಲಿ ನಾವು ದೊಡ್ಡ ನಿರ್ಧಾರ ಮಾಡಬೇಕಿದೆ. ನಾವು ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದು, ಈ ಸಭೆ ಬಹಳ ಪ್ರಮುಖವಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಈ ಸಭೆಯನ್ನು ಯಶಸ್ವಿಗೊಳಿಸುತ್ತಿದ್ದು, 26ರಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಶಾಶ್ವತ ಆಹ್ವಾನಿತರು, ವಿಶೇಷ ಆಹ್ವಾನಿತರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷಗ ನಾಯಕರುಗಳು, ಸಂಸದೀಯ ಸಮಿತಿ ಸದಸ್ಯರು, ಪಕ್ಷದ ಪ್ರಮುಖ ಘಟಕಗಳ ಅಧ್ಯಕ್ಷರು ಸಭೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಮರುದಿನ ಬೃಹತ್ ಸಮಾವೇಶ ನಡೆಯಲಿದ್ದು, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಇದೊಂದು ಮಹತ್ತರವಾದ ಸಭೆಯಾಗಲಿದೆ. ಅದೇ ದಿನ ಅದೇ ಸಮಯದಲ್ಲಿ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದಲೂ ಈ ಕ್ಷಣವನ್ನು ಆಚರಿಸುವಂತೆ ಎಐಸಿಸಿಯಿಂದ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಸರ್ಕಾರದ ವತಿಯಿಂದ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಇದೇ ವೇಳೆ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳು, ಸಂಸತ್ತಿನ ಎರಡೂ ಸದನಗಳ ವಿರೋಧ ಪಕ್ಷಗಳ ನಾಯಕರು ಸೇರಿ ಸುವರ್ಣಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಸದರಿಗೆ ಆಹ್ವಾನ ನೀಡಲಾಗುವುದು. ಎಲ್ಲಾ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ಆಹ್ವಾನ ನೀಡಲಾಗುವುದು” ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, “ಪಕ್ಷದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೇರೆ ಪಕ್ಷದವರಿಗೆ ಆಹ್ವಾನ ಇರುವುದಿಲ್ಲ. ಆದರೆ ಸರ್ಕಾರದ ವತಿಯಿಂದ ಮಾಡಲಾಗುತ್ತಿರುವ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರಿಗೆ ಆಹ್ವಾನ ನೀಡಲಾಗುವುದು” ಎಂದು ತಿಳಿಸಿದರು.
ಈಸ್ಟ್ ಇಂಡಿಯಾ ಕಂಪನಿ- ಮೋದಾನಿ ಕಂಪನಿಗೆ ವ್ಯತ್ಯಾಸವಿಲ್ಲ
ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಾತನಾಡಿ, “ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಷಣಕ್ಕೆ ಶತಮಾನೋತ್ಸವದ ಸಂಭ್ರಮ ಕೇವಲ ಕರ್ನಾಟಕ ರಾಜ್ಯದ ಜನರಿಗೆ ಮಾತ್ರವಲ್ಲ, ಇಡೀ ದೇಶದ ಜನರಿಗೆ ಹೆಮ್ಮೆಯ ವಿಚಾರ. ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಪರಿವರ್ತನೆಗಾಗಿ ಬಹಳ ಮಹತ್ನದ್ದಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸೇರಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಬೆಳಗಾವಿ ಭೂಮಿಯಿಂದ ಬದಲಾವಣೆಯ ಹೊಸ ಸಂಕಲ್ಪ ಮಾಡಿ ಜನ ಕಲ್ಯಾಣದತ್ತ ಕಾಂಗ್ರೆಸ್ ಸಾಗಬೇಕಿದೆ. ಆಗ ಈಸ್ಟ್ ಇಂಡಿಯಾ ಕಂಪನಿ ಅವರು ದೇಶ ಆಳಿದರೆ, ಇಂದು ಮೋದಾನಿ ಕಂಪನಿ ಆಳುತ್ತಿದೆ. ಅವರು ಬಡವರು, ದಲಿತರು, ಶೋಷಿತ ವರ್ಗದವರ ಮೇಲೆ ಆಕ್ರಮಣ ಮಾಡಿದರು. ಅದೇ ರೀತಿ ಮೋದಾನಿ ಕಂಪನಿಯವರು ಈ ವರ್ಗದವರ ಮೇಲೆ ಆಕ್ರಮಣ ಮಾಡುತ್ತಿದೆ. ಅದರ ಭಾಗವಾಗಿ ಒಂದು ದೇಶ ಒಂದು ಚುನಾವಣೆ. ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಾಗದೆ. ವಾಮಮಾರ್ಗದ ಮೂಲಕ ಪಂಡಿತ್ ನೆಹರೂ, ಸರ್ದಾರ್ ವಲ್ಲಭ ಬಾಯಿ ಪಟೇಲ್, ಅಂಬೇಡ್ಕರ್, ಮೌಲಾನ ಆಜಾದ್, ಡಾ.ರಾಜೇಂದ್ರ ಪ್ರಸಾದ್ ಅವರು ರಚಿಸಿರುವ ಸಂವಿಧಾನದ ಮೇಲೆ ಆಕ್ರಮಣ ಮಾಡಲು ಮುಂದಾಗಿದ್ದಾರೆ. ಈ ಬಾರಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಎಲ್ಲಾ ವಿಚಾರ ಚರ್ಚೆ ಮಾಡಿ ಪ್ರಮುಖ ನಿರ್ಣಯ ಕೈಗೊಳ್ಳಲಾಗುವುದು. ನಮ್ಮ ಮುಂದಿನ ಹೋರಾಟಕ್ಕೆ ಬೆಳಗಾವಿ ಮತ್ತೊಮ್ಮೆ ನಮಗೆ ದಾರಿ ತೋರಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಪ್ರಶ್ನೋತ್ತರ
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿರುವ ಮುಖ್ಯ ವಿಚಾರಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್ ಅವರು, “ಸಧ್ಯ ದೇಶದಲ್ಲಿರುವ ರಾಜಕೀಯ ಪರಿಸ್ಥಿತಿ ಅವಲೋಕಿಸಿ, ಬಿಡಜೆಪಿ ಸರ್ಕಾರ ತನ್ನ ಸಿದ್ಧಾಂತಗಳನ್ನು ಕಾನೂನು ಮೂಲಕ ಹೇರುತ್ತಿರುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಚರ್ಚೆ ಮಾಡಲಾಗುವುದು. ಸಭೆಯಲ್ಲಿ ಸಂಪೂರ್ಣ ಚರ್ಚೆ ಮಾಡಿದ ಬಳಿಕ ನಾವು ಚರ್ಚೆಯಾದ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡುತ್ತೇವೆ” ಎಂದರು.
ಒಂದು ದೇಶ ಒಂದು ಚುನಾವಣೆ ಬಗ್ಗೆ ಕೇಳಿದಾಗ, “ಒಂದು ದೇಶ ಒಂದು ಚುನಾವಣೆ ಎಂಬುದು ಚುನಾವಣೆಗಳಿಲ್ಲದ ಒಂದು ದೇಶವಾಗಿ ಮಾರ್ಪಾಡು ಮಾಡುವ ಹುನ್ನಾರ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಪ್ರಮುಖ ಅಜೆಂಡಾ ಇದೇ ಆಗಿದೆ. ಅವರಿಗೆ ಪ್ರಜಾಸತಾತ್ಮಕ ಪ್ರಕ್ರಿಯೆ ಮೇಲೆ ಆಸಕ್ತಿ ಇಲ್ಲ. ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡಲು ಇಂತಹ ಪರಿಕಲ್ಪನೆ ತರುತ್ತಿದ್ದಾರೆ. ಕರ್ನಾಟಕ, ಕೇರಳ, ಮಣಿಪುರ, ಜಮ್ಮು ಕಾಶ್ಮೀರ ಸೇರಿದಂತೆ ಒಂದೊಂದು ರಾಜ್ಯ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ವಿವಿಧತೆಯಲ್ಲಿ ಏಕತೆಯೇ ಈ ದೇಶದ ಶಕ್ತಿ. ಆದರೆ ಬಿಜೆಪಿಯವರು ಪ್ರಜಾಪ್ರಭುತ್ವ, ವೈವಿದ್ಯತೆ ಮೇಲೆ ನಂಬಿಕೆ ಇಲ್ಲ. ಈ ಪ್ರಕ್ರಿಯೆ ವಾಸ್ತವವಾಗಿ ಜಾರಿ ಮಾಡಲು ಸಾಧ್ಯವಿಲ್ಲ. ಆದರೂ ಇದನ್ನು ಬಿಜೆಪಿ ಸಂಸತ್ತಿನಲ್ಲಿ ಅನುಮೋದನೆ ಮಾಡಲಿದೆ ಎಂಬುದು ನಮಗೆ ಗೊತ್ತಿದೆ” ಎಂದು ತಿಳಿಸಿದರು.
ದೇಶದ ಇತರೆ ಭಾಗಗಳಲ್ಲಿ ಬೇರೆ ಕಾರ್ಯಕ್ರಮ ಮಾಡಲಾಗುವುದೇ ಎಂದು ಕೇಳಿದಾಗ, “ಈಗ ನಾವು ಈ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಕಾರ್ಯಕ್ರಮ ಮಾಡಲಾಗುವುದು. ಕಾರ್ಯಕಾರಿ ಸಮಿತಿ ಈ ಕಾರ್ಯಕ್ರಮಗಳನ್ನು ರೂಪಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ