*ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಹಬ್ಬದ ವಾತಾವರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ದಸರಾ ಹಬ್ಬದ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ
ಪ್ರಗತಿವಾಹಿನಿ ಸುದ್ದಿ: 100 ವರ್ಷದ ಇತಿಹಾಸವನ್ನ ಮರುಕಳಿಸುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಇಡೀ ಬೆಳಗಾವಿ ನಗರ ಸಜ್ಜಾಗಿದೆ. ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಹಬ್ಬದ ಮಾದರಿಯಲ್ಲಿ ಬೆಳಗಾವಿ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದರು.
1924ರಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಆ ವೇಳೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಕಿಚ್ಚನ್ನು ಈ ಭಾಗದಲ್ಲಿ ಹಚ್ಚಿದ್ದರು. ಆ ಒಂದು ಸವಿನೆನಪಿಗಾಗಿ ಗಾಂಧಿ ಭಾರತ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ವಿದ್ಯುತ್ ದೀಪಾಲಂಕಾರವನ್ನು ನೋಡುವ ಸಲುವಾಗಿ ಬೆಳಗಾವಿಯ ಗ್ರಾಮೀಣ ಪ್ರದೇಶದ ಜನರು ಬರುತ್ತಿದ್ದಾರೆ. ಜಿಲ್ಲೆಯ ಪಾಲಿಗೆ ಇದು ಹಬ್ಬವಾಗಲಿದೆ ಎಂದು ಹೇಳಿದರು.
ಡಿಸೆಂಬರ್ 26, 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿರುವ ವೀರಸೌಧಕ್ಕೆ (ಕಾಂಗ್ರೆಸ್ ಬಾವಿಗೆ) ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಲ್ಲಿನ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಇದೇ ವೇಳೆ ವೀರಸೌಧದಲ್ಲಿ ಅನಾವರಣಗೊಂಡಿರುವ 1924 ರ ಕಾಂಗ್ರೆಸ್ ಅಧಿವೇಶನದ ಭಾವಚಿತ್ರಗಳನ್ನು ಸಹ ವೀಕ್ಷಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ