ಪ್ರಗತಿವಾಹಿನಿ ಸುದ್ದಿ; ಗೋಕಾಕ: ದೇಶಕ್ಕೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವಗಾಂಧಿಯವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯ ನಂತರದಲ್ಲಿ ದೇಶವನ್ನು ಅತ್ಯಂತ ಆರೋಗ್ಯ ಪೂರ್ಣವಾಗಿ ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುತ್ತದೆ. ಕಾಂಗ್ರೆಸ್ ಮಸೀದಿ , ಮಂದಿರ, ಚರ್ಚ್ ಗಳನ್ನ ಕಟ್ಟುವುದರ ಜೊತೆಗೆ ಜನಪರ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿ ಇತ್ತು ಎಂದು ಹೇಳಿದರು.
ಬಳಿಕ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನದ ಅಂಗವಾಗಿ ಯುವಕರು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠವಾಗಿದೆ. ರಕ್ತದಾನ ಮಾಡಿದರೆ ಒಂದು ಪ್ರಾಣ ಉಳಿಸಿದಂತೆ . ಆದ ಕಾರಣ ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುವದಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಈ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ದೇಶದಲ್ಲಿ ಸಮಾಜವನ್ನು ವಿಭಜಿಸದೆ ಎಲ್ಲಾ ವರ್ಗಗಳ ಏಳ್ಗೆಗಾಗಿ ಶ್ರಮಿಸಿ , ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಏಕೈಕ ರಾಷ್ಟ್ರೀಯ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ದೇಶದ ಉಳಿವಿಗಾಗಿ ತನ್ನದೇಯಾದಂತ ಕೊಡುಗೆ ನೀಡಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ, ಮಾರುತಿ ವಿಜಯನಗರ, ಕಲ್ಲಪ್ಪಾ ಗೌಡಾ ಲಕ್ಕಾರ, ಬಸನಗೌಡ ಹೋಳಾಚ್ಚಿ, ರಾಹುಲ್ ಬಡೆಸಗೋಳ, ಶಿವಲಿಂಗ ಕೋಟಬಾಗಿ, ಮುನ್ನಾ ಖತ್ತಿಬ್, ಮಂಜುಳಾ ರಾಮಗಾನಟ್ಟಿ, ಮಾರುತಿ ವಿಜಯನಗರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ನೈಟ್ ಕರ್ಫ್ಯೂ ಉಲ್ಲಂಘಿಸಿದರೆ ಎಫ್ ಐಆರ್ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ