ಪ್ರಗತಿವಾಹಿನಿ ಸುದ್ದಿ: ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತದಿಂದ ಮತಾಂತರಕ್ಕೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಆರೀಫ್ ಹಾಗೂ ಆತನ ಪತ್ನಿ ಬಂಧಿತರು.
ಸಂತ್ರಸ್ತ ಮಹಿಳೆ ಮುನವಳ್ಳಿಯಲ್ಲಿ ವಾಸವಾಗಿದ್ದು, ಆಕೆಯ ಪತಿ ಮುನವಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಪತಿ ಅಂಗಡಿಯಲ್ಲಿ ಇಲ್ಲದಿದ್ದಾಗ ಮಹಿಳೆ ಅಂಗಡಿಯ ವ್ಯಾಪಾರ-ವಹಿವಾಟು ನೋಡಿಕೊಳ್ಳುತ್ತಿದ್ದರು. ಈ ವೇಳೆ ಆರೋಪಿ ಆರೀಫ್ ಬೆಪಾರಿ ಎಂಬಾತ ತಾನು ನೆರಮನೆಯವನೆಂದು ಮಹಿಳೆಯನ್ನು ಪರಿಚಯ ಮಾಡಿಕೊಂಡು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ಬಳಿಕ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಮಹಿಳೆಯನ್ನು ಬೆಳಗಾವಿಗೆ ಕರೆತಂದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ ಆರೋಪಿ ಆರೀಫ್ ಗೆ ಮತ್ತೆ ಐವರು ಸಾಥ್ ನೀಡಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು ಇಲ್ಲವಾದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಬಲವಂತದಿಂದ ಮಹಿಳೆಗೆ ಬುರ್ಖಾ ಧರಿಸುವಂತೆ ಮಾಡಿ ಹಿಂಸಿಸಿದ್ದಾರೆ.
ಆರೋಪಿಗಳ ಕೈಯಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಸವದತ್ತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಆರೀಫ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದು, ಆದಿಲ್ ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ