ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜನರ ಸಹಕಾರದಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದೆ.
ಏಪ್ರಿಲ್ 7 ರಂದು ಒಂದೇ ದಿನ ಮೊದಲ ಹಾಗೂ ಎರಡನೇ ಡೋಸ್ ಸೇರಿದಂತೆ ಒಟ್ಟಾರೆ 26657 ಜನರಿಗೆ ಲಸಿಕೆ ನೀಡವ ಮೂಲಕ ರಾಜ್ಯದ ಗಮನ ಸೆಳೆದಿದೆ. 26,657 ಲಸಿಕೆ ಪೈಕಿ 26,067 ಲಸಿಕೆ ಮೊದಲ ಡೋಸ್ ಆಗಿರುವುದು ಗಮನಾರ್ಹ ಸಂಗತಿಯಾಗಿದೆ.
ಜಿಲ್ಲೆಯಲ್ಲಿ 3.07 ಲಕ್ಷ ಲಸಿಕೆ:
ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 3,07,867 ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಇದರಲ್ಲಿ 60 ವರ್ಷ ಮೇಲ್ಪಟ್ಟವರು, ಕೊಮಾರ್ಬಿಡಿಟಿ ಹೊಂದಿರುವ 45 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸ್, ಕಂದಾಯ, ಜಿಪಂ ಸೇರಿದಂತೆ ಫ್ರಂಟಲೈನ್ ಕೆಲಸಗಾರರು ಸೇರಿದ್ದಾರೆ.
ಜಿಲ್ಲೆಯಲ್ಲಿ ಭಾಗಶಃ ತಾಲ್ಲೂಕುಗಳಲ್ಲಿ ಚುನಾವಣಾ ಕಾರ್ಯ ನಡೆಯುತ್ತಿದ್ದು, ಇದರ ಮಧ್ಯೆಯೂ ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಲಸಿಕಾಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯು ರಾಜ್ಯದ ಗಡಿಭಾಗದಲ್ಲಿ ಇರುವುದರಿಂದ ಕೋವಿಡ್ ಲಸಿಕಾಕರಣಕ್ಕೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಹೆಚ್ಚು ಹೆಚ್ಚು ಜನರಿಗೆ ಲಸಿಕೆ ನೀಡುವ ಉದ್ಧೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಶ್ರಮಿಸಲಾಗುತ್ತಿದೆ.
ಪ್ರತಿದಿನ 30 ಸಾವಿರ ಲಸಿಕೆ ಗುರಿ:
ಜಿಲ್ಲೆಯಲ್ಲಿ ಪ್ರತಿದಿನ 30 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಜನರ ಸಹಕಾರದಿಂದ ಲಸಿಕಾಕರ ಅಭಿಯಾನದಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ. ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲದಿರುವುದು ಕಂಡುಬಂದಿದೆ. ಆದ್ದರಿಂದ ಲಸಿಕೆ ಪಡೆಯುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಲ ಕಾಲಕ್ಕೆ ಸರ್ಕಾರ ಹೊರಡಿಸುವ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಲಸಿಕಾಕರಣ ಅಭಿಯಾನದ ಯಶಸ್ಸಿಗೆ ಜನರು ಕೂಡ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ