ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ರಾಜ್ಯದಲ್ಲಂತೂ ಶರವೇಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ ಕೊರೊನಾ ಸೋಂಕಿಗೆ ಔಷಧ ಸಿದ್ದಪಡಿಸಲಾಗಿದ್ದು, ಔಷಧಿಯ ಪ್ರಯೋಗಕ್ಕೆ ಈಗಾಗಲೇ ಸಿದ್ದತೆ ನಡೆದಿದೆ. ದೇಶದ 13 ಕಡೆಗಳಲ್ಲಿ ಪ್ರಯೋಗ ನಡೆಯಲಿದೆ.
ಹೌದು. ಕೊರೊನಾ ಸೋಂಕಿಗೆ ಔಷಧ ಕಂಡು ಹಿಡಿಯಲಾಗಿದ್ದು, ರಾಜ್ಯದಲ್ಲಿ ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ಈ ಔಷಧಿಯ ಪ್ರಯೋಗ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಹಾಗೂ ಭಾರತ ಬಯೋಟೆಕ್ ಇಂಟರ್ನ್ಯಾಶನಲ್ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಸಂಶೋಧನೆ ನಡೆಸಿ ಔಷಧಿ ಸಿದ್ದಪಡಿಸಿವೆ. ಕೋವಿಕ್ಸಿನ್ ಎಂಬ ಹೆಸರಿನ ಸ್ವದೇಶಿ ಔಷಧಿ ಸಿದ್ದವಾಗಿದ್ದು ಪ್ರಯೋಗಕ್ಕಾಗಿ ದೇಶದ 13 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯು ಒಂದಾಗಿದೆ.
ರಾಜ್ಯದಲ್ಲಿ ಒಂದು ಕಡೆಯಲ್ಲಿ ಈ ವ್ಯಾಕ್ಸಿನ್ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಜೀವನ ರೇಖಾ ಆಸ್ಪತ್ರೆಯ ಹೆಸರು ಘೋಷಣೆ ಮಾಡಿದ್ದು, ಮುಂದಿನ ವಾರದಲ್ಲಿ ಪ್ರಯೋಗ ಆರಂಭವಾಗಲಿದೆ.
ಈ ಬಗ್ಗೆ ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ ಮಾಹಿತಿ ನೀಡಿದ್ದು, ಕರ್ನಾಟಕ ಒಂದೇ ಸೆಂಟರ್ ಕೊರೋನಾ ಔಷಧಿ ಪ್ರಯೋಗಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ವಾರದಿಂದ ಪ್ರಯೋಗ ಆರಂಭವಾಗಲಿದೆ. ಇನ್ನೂ ಕೇಂದ್ರ ಸರ್ಕಾರದಿಂದ ಅನೇಕ ಗೈಡ್ ಲೈನ್ಸ್ ಬರಬೇಕಿದೆ. ಜತೆಗೆ ಶೀಘ್ರದಲ್ಲಿಯೇ ಪ್ರಯೋಗವನ್ನು ಆರಂಭಿಸಿ, ಆದಷ್ಟು ಬೇಗ ಮುಗಿಸಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ