
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಷಲ್ ಪಡೆಗಳನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ 121 ಮಾರ್ಷಲ್ ಪಡೆಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೊವಿಡ್ -19 , ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ದಿನಾಂಕ ಸೋಮವಾರ (ಏ.19) ರಂದು ವಿಡಿಯೋ ಸಂವಾದ ಜರುಗಿಸಿ, ಜಿಲ್ಲೆಯ 33 ನಗರ ಸ್ಥಳೀಯ ಸಂಸ್ಥೆಗಳಲ್ಲಿ 121 ಕೋವಿಡ್ ಮಾರ್ಷಲ್ ಪಡೆಗಳನ್ನು ರಚಿಸಲು ಸೂಚಿಸಿರುತ್ತಾರೆ.
ಅದರಂತೆ 33 ನಗರ ಸ್ಥಳೀಯ ಸಂಸ್ಥೆಗಳಲ್ಲಿ 121 ಕೋವಿಡ್ ಮಾರ್ಷಲ್ ಪಡೆಗಳನ್ನು ರಚಿಸಿದ್ದು, ಕೋವಿಡ್ ಮಾರ್ಷಲ್ ಪಡೆಗಳು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹಾಗೂ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸುವುದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕಾರ್ಯನಿರ್ವಹಿಸಲಿವೆ.
ಮಾರ್ಷಲ್ ಪಡೆಯ ಕಾರ್ಯಚಟುವಟಿಕೆಗಳು:
1 ) ಸಾರ್ವಜನಿಕರು ತೆರೆದ ಮಾರುಕಟ್ಟೆಗಳಲ್ಲಿ ಗುಂಪು ಗುಂಪಾಗಿ ಸೇರುವುದನ್ನು ಕೆವಿಡ್ ಮಾರ್ಷಲ್ ಪಡೆಗಳು ತಡೆಗಟ್ಟಲಿದ್ದಾರೆ.
2 ) ತೆರೆದ ಪ್ರದೇಶಗಳಲ್ಲಿ ಸಂಸ್ಥೆ ನಡೆಸುವ ವರ್ತಕರು ಅವರವರ ಮಳಿಗೆಗಳನ್ನು 3 ಅಡಿ ಅಂತರ ಕಾಯ್ದುಕೊಳ್ಳುವಂತೆ ಕೋವಿಡ್ ಮಾರ್ಷಲ್ ಪಡೆಗಳು ಕಾರ್ಯನಿರ್ವಹಿಸಲಿದ್ದಾರೆ.
3 ) ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ನಿಯಮ ಉಲ್ಲಂಘಿಸುವ ಸಾರ್ವಜನಿಕರನ್ನು ಕೊವಿಡ್ ಮಾರ್ಷಲ್‌ಗಳು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೊರೋನಾ ವೈರಸ್ ಇರುವ ಬಗ್ಗೆ ಪರಿಶೀಲನೆಗೆ ಒಳಪಡಿಸುತ್ತಾರೆ.
4 ) ಉದ್ದಿಮೆ ನಡೆಸುವ ವರ್ತಕರು ಅಂಗಡಿ ಮುಂಭಾಗ 3 ಅಡಿ ಅಂತರ ಕಾಯ್ದುಕೊಳ್ಳುವ ಸಲುವಾಗಿ ಗುರುತು ( ಬಾಕ್ಸ್ ) ಹಾಕಿಸುವದು ಹಾಗೂ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಯಾವುದೇ ರೀತಿ ವಸ್ತುಗಳನ್ನು ಮಾರಾಟ ಮಾಡದಂತ ಕೊವಿಡ್ ಮಾರ್ಷಲ್ ಪಡೆಗಳು ನೋಡಿಕೊಳ್ಳುತ್ತಾರೆ.
5 ) ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿರುತ್ತದೆ. ಸಾರ್ವಜನಿಕರು ಮಾಸ್ಕ್ ಧರಿಸದಿದ್ದಲ್ಲಿ, ಕೋವಿಡ್ ಮಾರ್ಷಲ್ ಪಡೆಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೂ 250 ಹಾಗೂ ನಗರಸಭೆ,ಪುರಸಭೆ, ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ರೂ 100 ದಂಡ ವಿಧಿಸಲಿದ್ದಾರೆ.
6 ) ಮದುವೆ ಹಾಗೂ ಇನ್ನಿತರೆ ಸಮಾರಂಭಗಳು ನಡೆಯುವ ಕಟ್ಟಡದ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ .50 ರಷ್ಟು ಮಾತ್ರ ಜನರು ಸೇರಲು ಅವಕಾಶವಿರುತ್ತದೆ. ನಿಯಮವು ಉಲ್ಲಂಘನೆಯಾಗದಂತೆ ಕೋವಿಡ್ ಮಾರ್ಷಲ್ ಪಡೆಗಳು ಕಾರ್ಯನಿರ್ವಹಿಸಲಿದ್ದಾರೆ.
7) ಮದುವೆ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡಿರುವ ಕುರಿತು ಕೊವಿಡ್ ಮಾರ್ಷಲ್ ಪಡೆಗಳು ಪರಿಶೀಲಿಸಲಿದ್ದಾರೆ. ಅನುಮತಿ ಪಡೆಯದ ಕಟ್ಟಡ ಮಾಲೀಕರ ಉದ್ದಿಮೆ ಪರವಾನಿಗೆ ರದ್ದು ಮಾಡುವ ಕುರಿತು ಅವಶ್ಯಕ ಕ್ರಮ ಕೈಗೊಳ್ಳಲಿದ್ದಾರೆ.
8) ಜನ್ಮದಿನ ಹಾಗೂ ಇತರೆ ಆಚರಣೆಗಳು ನಡೆಯುವ ಸ್ಥಳಗಳಲ್ಲಿ ತೆರೆದ ಪ್ರದೇಶಗಳಲ್ಲಿ 50 ಮೀರದಂತೆ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು ಮೀರದಂತೆ ಸೇರುವ ಕುರಿತು ಕೋವಿಡ್ ಮಾರ್ಷಲ್ ಪಡೆಗಳು ನಿಗಾ ವಹಿಸಲಿದ್ದಾರೆ.
9 ) ನಿಧನ, ಶವಸಂಸ್ಕಾರ ನಡೆಯುವ ವೇಳೆಯಲ್ಲಿ ತೆರೆದ ಪ್ರದೇಶಗಳಲ್ಲಿ 50 ಜನರು ಮೀರದಂತೆ ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು ಮೀರದಂತೆ ಸೇರುವ ಕುರಿತು ಕೊವಿಡ್ ಮಾರ್ಷಲ್ ಪಡೆಗಳು ನಿಗಾ ವಹಿಸಲಿದ್ದಾರೆ.
10 ) ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ 25 ಜನರು ಮೀರದಂತೆ ಕೋವಿಡ್ ಮಾರ್ಷಲ್ ಪಡೆಗಳು ನಿಗಾ ವಹಿಸಲಿದ್ದಾರೆ.
11 ) ನಗರ ಸ್ಥಳೀಯ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗಳು, ಸಮಾರಂಭಗಳು ನಡೆಯದಂತೆ ಕೋವಿಡ್ ಮಾರ್ಷಲ್ ಪಡೆಗಳು ಕ್ರಮ ವಹಿಸಲಿದ್ದಾರೆ.
12 ) ಸಾರ್ವಜನಿಕರಿಗೆ ಕೋವಿಚ್ -19 ರೋಗ ಇರುವ ಕುರಿತು ಮನದಟ್ಟಾದಲ್ಲಿ , ಮನೆಯಲ್ಲಿ ಪ್ರತ್ಯೇಕವಾದ ಕೋಣೆ ಹಾಗೂ ಶೌಚಾಲಯ ಇದ್ದಲ್ಲಿ ಮಾತ್ರ ಮನೆಯಲ್ಲಿ ಚಿಕಿತ್ಸೆ ಇರುವುದು. ಇಲ್ಲದಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕಾಗಿರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಕೋವಿಡ್ ಮಾರ್ಷಲ್ ಪಡೆಗಳು ನಿಯಮಾನುಸಾರ ಕ್ರಮ ವಹಿಸಲಿದ್ದಾರೆ.
ಮೇಲಿನ ನಿರ್ದೇಶನಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಕೋರಿದೆ . ಒಂದು ವೇಳೆ ಸಾರ್ವಜನಿಕರು ಸದರಿ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ, ವಿಪತ್ತು ನಿರ್ವಹಣಾ ನಿಯಮಗಳು 2005 ರಂತೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಈಶ್ವರ್ ಉಳ್ಳಾಗಡ್ಡಿ ತಿಳಿಸಿದ್ದಾರೆ.
ನಾಳೆಯಿಂದ ರಾಜ್ಯಾದ್ಯಂತ ಹೊಸ ರೂಲ್ಸ್; ನೈಟ್, ವೀಕೆಂಡ್ ಕರ್ಫ್ಯೂ ; ಶಾಲೆ, ಕಾಲೇಜು ಬಂದ್; ಇಲ್ಲಿದೆ ಗೈಡ್ ಲೈನ್ಸ್
ಬೆಳಗಾವಿ: ತಾಲೂಕು ಮಟ್ಟದಲ್ಲಿ ವಾರ್ ರೂಂ