*ಬೆಳಗಾವಿ: ಹೈನುಗಾರಿಕೆ ಮಾಡುವ ರೈತರಿಗೆ ಗುಡ್ ನ್ಯೂಸ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹಾಲಿನ ಉತ್ಪನ್ನಗಳನ್ನು ಹೆಚ್ಚು ಮಾಡುವ ಉದ್ದೇಶದಿಂದ ಹೈನುಗಾರಿಕೆ ಮಾಡುವ ರೈತರಿಗೆ 50 ಸಾವಿರ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲು ಕೆಎಂಎಫ್ ನಿಂದ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ವಿವೇಕರಾವ್ ಪಾಟೀಲ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಂಡು ಜಿಲ್ಲೆಯಲ್ಲಿ ಸುಮಾರು 7 ಸಾವಿರ ಹಸುಗಳು ಮೃತಪಟ್ಟಿವೆ. ಇದು ರಾಜ್ಯದಲ್ಲಿ ಎರಡನೇ ಜಿಲ್ಲೆಯಲ್ಲಿ ಬೆಳಗಾವಿ ಬರುತ್ತದೆ. ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದರು.
ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಾಗ ಹಸುಗಳನ್ನು ಮಾರಾಟ ಮಾಡಿದ ರೈತರು ಮತ್ತೆ ಹೈನುಗಾರಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರತಿ ಸೊಸೈಟಿಗೆ ಐದು ಲಕ್ಷ ರೂ.ಗಳನ್ನು ಕೆಎಂಎಫ್ ನಿಂದ ನೀಡಲಾಗಿದೆ. ಸೊಸೈಟಿಗೆ ಹೆಚ್ಚು ಹಾಲು ಕಳುಹಿಸುತ್ತಿದ್ದ ರೈತರು ಹಸು ಖರೀದಿಸಲು ಮುಂದು ಬಂದರೆ ಸೊಸೈಟಿಯಿಂದ ಹಸು ಖರೀದಿಸಲು 50 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡಲಾಗುವುದು. ಇದರ ಲಾಭವನ್ನು ರೈತರು ಸದುಪಯೋಗ ಪಡೆಸಿಕೊಂಡು ಹೆಚ್ಚು ಹೆಚ್ಚು ಹಾಲನ್ನು ಸೊಸೈಟಿಗೆ ನೀಡಿ ಆರ್ಥಿಕವಾಗಿ ಮುಂದೆ ಬರಲು ಅನಕೂಲವಾಗುತ್ತದೆ ಎಂದರು.
ಈ ಯೋಜನೆಯಿಂದ ಹಾಲು ಉತ್ಪಾದನೆಯಲ್ಲಿ ಸಹಜವಾಗಿ ಹೆಚ್ಚಳವಾಗುತ್ತದೆ. ಇದರಿಂದ ಹೈನು ಉತ್ಪಾದನೆಯನ್ನು ವೃದ್ಧಿಸಿ ಸಂಘದ ಹಾಲು ಶೇಖರಣೆ ಹೆಚ್ಚಾಗಿ ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಕಡೆಗಳಲ್ಲಿ ಕೆಮಿಕಲ್ ಮಿಶ್ರಿತ ಹಾಲು ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಂಬಂಧಿಸಿದ ಪುರಸಭೆ ಹಾಗೂ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಅಂಥ ಘಟಕಗಳ ಮೇಲೆ ದಾಳಿ ಮಾಡಬೇಕು. ಇಲ್ಲದಿದ್ದರೆ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕೆಎಂಎಫ್ ಅಧ್ಯಕ್ಷನಾಗಿದ್ದ ವೇಳೆ ಬೆಳಗಾವಿಯಲ್ಲಿಯೇ ಮೇಘಾ ಹಾಲಿನ ಡೈರಿ ಸ್ಥಾಪನೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ ಅದಕ್ಕೆ ಜಾಗೆಯ ಕೊರತೆ ಇದೆ. ಜಾಗೆ ಸಿಕ್ಕರೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಬೆಳಗಾವಿಯಲ್ಲಿ ಮೇಘಾ ಡೈರಿ ಪ್ರಾರಂಭಿಸಲು ಶ್ರಮಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
-: ಹೈನುರಾಸು ಖರೀದಿ ಯೋಜನೆ :-
ಕಳೆದ ವರ್ಷ ರಾಜ್ಯದಲ್ಲಿ ಮತ್ತು ಅದರಲ್ಲೂ ಬೆಳಗಾವಿ: ಜಿಲ್ಲೆಯಲ್ಲಿ ರಾಸುಗಳಲ್ಲಿ ಚರ್ಮಗಂಟು ರೋಗ ಉಲ್ಬಣಿಸಿ ಅಂದಾಜು ೭೦೦೦ ಹೈನುರಾಸುಗಳು ಮರಣ ಹೊಂದಿರುತ್ತವೆ. ಸದರಿ ರೋಗದಿಂದ ರಾಸುಗಳು ಮರಣ ಹೊಂದಿರುವುದರಲ್ಲಿ ಬೆಳಗಾವಿ ರಾಜ್ಯದ ಎರಡನೇ ಜಿಲ್ಲೆಯಾಗಿದೆ ಮತ್ತು ರೋಗದಿಂದ ಚೇತರಿಸಿಕೊಂಡ ರಾಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿ ಹೈನು ಉತ್ಪಾದನೆಯಲ್ಲಿ ಹಿನ್ನೆಡೆಯಾಗಿರುತ್ತದೆ. ಹಲವಾರು ಉತ್ಪಾದಕರುಗಳು ಚೀತರಸಿಕೊಂಡ ಹೈನುರಾಸುಗಳನ್ನು ಮಾರಾಟ ಮಾಡಿ ಹೈನುಗಾರಿಕೆಯನ್ನು ಹೊಂದಿರುತ್ತಾರೆ. ಇದರಿಂದ ಒಕ್ಕೂಟದ ಹಾಲು ಶೇಖರಣೆಯು ಕೂಡಾ ಕಡಿಮೆಯಾಗಿರುತ್ತದೆ. ತತ್ಸಂಬಂಧ ಉತ್ಪಾದಕರಿಗೆ ಹೈನು ರಾಸುಗಳನ್ನು ಕೊಡಿಸಿ ಹಾಲು ಶೇಖರಣೆಯನ್ನು ಹೆಚ್ಚಿಸುವುದು ಅವಶ್ಯವಾಗಿರುತ್ತದೆ. ಈ ಸಂಬಂಧ ದಿನಾಂಕ ೧೧.೦೮.೨೦೨೩ ರ ಒಕ್ಕೂಟದ ೨೮/೨೦೨೩-೨೪ ನೇ ಆಡಳಿತ ಮಂಡಳಿ ಸಭೆಯ ತೀರ್ಮಾನದಂತೆ ಒಕ್ಕೂಟದ ರಾಸು ಅಭಿವೃದ್ಧಿ ನಿಧಿ ಖಾತೆಯಿಂದ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಿ ಉತ್ಪಾದಕರಿಗೆ ಹೈನುರಾಸುಗಳನ್ನು ಬಿರಿದಿಸಲು ಅನುವುಮಾಡಿಕೊಂಡು ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.
ಸದರಿ ಯೋಜನೆಯಿಂದ ಉತ್ಪಾದಕರುಗಳಲ್ಲಿ ರಾಸು ಖರೀದಿ ಪ್ರಕ್ರಿಯೆ ಉತ್ತೇಜನಗೊಂಡು ಉತ್ತಮ ತಳಿಯ ಹೈನುರಾಸುಗಳ ಸಂಖ್ಯೆ ಗ್ರಾಮಗಳಲ್ಲಿ ಹೆಚ್ಚುತ್ತದೆ. ಇದರಿಂದ ಉತ್ಪಾದಕರಲ್ಲಿ ಹೈನುಉತ್ಪಾದನೆ ವೃದ್ಧಿಸಿ ಸಂಘದ ಹಾಲು ಶೇಖರಣೆ ಅಧಿಕಗೊಂಡು ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ. ಸದರಿ ಯೋಜನೆಯಲ್ಲಿ ಹೈನುರಾಸುಗಳನ್ನು ಹೊರ ಜಿಲ್ಲೆ/ ರಾಜ್ಯಗಳಿಂದ ಖರೀದಿಸಲು ತೀರ್ಮಾನಿಸಲಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಒಕ್ಕೂಟದ ಹಾಲು ಶೇಖರಣೆ ಹೆಚ್ಚಾಗಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರುಗಳಿಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಹಾಯವಾಗುತ್ತದೆ. ಹೀಗೆ ಒಕ್ಕೂಟದ ಬೆಳವಣಿಗೆಯ ಜೊತೆಗೆ ಹಾಲು ಉತ್ಪಾದಕರುಗಳ ಸರ್ವೋತೋಮುಖ ಸಂಘ ಕ್ಷೇಮಾಭಿವೃದ್ಧಿಯಾಗುತ್ತದೆ.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಬೆಳಗಾವಿ ಯು ಜಿಲ್ಲೆಯ ರೈತರ ಬೆನ್ನೆಲುಬಾಗಿದ್ದು, ಹೀಗೆ” ಹಲವು ಅಭಿವೃದ್ಧಿ ಯೋಜನೆಗಳನ್ನು, ರೂಪಿಸಿಕೊಂಡು ರೈತರ ಶ್ರೇಯಾಭಿವೃದ್ಧಿಗೆ ಶ್ರಮಿಸುವ ಸಂಸ್ಥೆಯಾಗಿರುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ