ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಟ್ರಕ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಯುವರಾಜ ಉಮಲು ರಾಠೋಡ್, ಸುರೇಶ್ ಉಮಲು ರಾಠೋಡ್ ಹಾಗೂ ಮುತ್ತು ಉಮಲು ರಾಠೋಡ್ ಎಂದು ಗುರುತಿಸಲಾಗಿದೆ. ಸ್ಕಾರ್ಪಿಯೋದಲ್ಲಿ ಬಂದ 8 ಜನ ದರೋಡೆಕೋರರ ಗುಂಪು ಕೊಲ್ಲಾಪುರ ರಸ್ತೆಯಲ್ಲಿ ತಿಂಡಿ ತಿನ್ನಲೆಂದು ಟ್ರಕ್ ನಿಲ್ಲಿಸಿ ಹೋಟೆಲ್ ಗೆ ಹೋಗಿದ್ದ ಚಾಲಕ ರಮೇಶ್ ಪ್ರಹ್ಲಾದ್ ಎಂಬಾತನನ್ನು ಅಪಹರಿಸಿ ಆತನ ಮೇಲೆ ಹಲ್ಲೆ ನಡೆಸಿ ಹಣ, ಎಟಿಎಂ ಕಾರ್ಡ್, ಮೊಬೈಲ್ ಕಿತ್ತುಕೊಂಡಿದ್ದರಲ್ಲದೇ, ಆತನನ್ನು ಬೆದರಿಸಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ರಮೇಶ್ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣ ಭೇದಿಸಿರುವ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಳಗಾವಿ ಎಸ್ ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ ಪಿ ಅಮರನಾಥ ರೆಡ್ದಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚಿಕ್ಕೋಡಿ ಡಿ ಎಸ್ ಪಿ ಮನೋಜ್ ಕುಮಾರ್ ನೇತೃತ್ವದ ನಿಪ್ಪಾಣಿ ಸಿಪಿಐ ಸಂತೋಷ್ ಸತ್ಯನಾಯಕ, ಪಿಎಸ್ ಐ ಬಿಎಸ್ ತಳವಾರ, ಎ ಎಸ್ ಐ ಎಸ್.ಎ ತೋಲಗಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ