
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಚ್.ಐ.ವಿ/ಏಡ್ಸ್ ಪೀಡಿತರಿಗೆ ರೇಷನ್ ಕಾರ್ಡು, ವೈದ್ಯಕೀಯ ಸೌಲಭ್ಯ, ಶಾಲಾ ಪ್ರವೇಶ, ವಿದ್ಯಾರ್ಥಿ ವೇತನ, ವಸತಿ ಯೋಜನೆಯಡಿ ವಸತಿ ಸೇರಿದಂತೆ ಸರ್ಕಾರದಿಂದ ನೀಡಲಾಗುತ್ತಿರುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ನ.26) ನಡೆದ ಜಿಲ್ಲಾ ಮಟ್ಟದ ಎಚ್.ಐ.ವಿ./ಏಡ್ಸ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್.ಐ.ವಿ. ಸೋಂಕಿತರಿಗೆ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸಿದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಶಾಲೆಗಳಲ್ಲಿ ಮಕ್ಕಳಿಗೆ ತಾರತಮ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಿಯೇ ತಾರತಮ್ಯ ಅಥವಾ ಕಿರುಕುಳ ಕಂಡುಬಂದರೆ ಪೊಲೀಸ್ ಪ್ರಕರಣವನ್ನು ದಾಖಲಿಸಬೇಕು. ಇಂತಹ ಪ್ರಕರಣದಲ್ಲಿ ಸೋಂಕಿತರ ಬಗ್ಗೆ ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆ ಸೇರಿದಂತೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಕಾರ್ಮಿಕ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಸೋಂಕಿತರಿಗೆ ಏಕಗವಾಕ್ಷಿ ವ್ಯವಸ್ಥೆಯಡಿ ನೀಡಲಾಗುವ ಸಹಾಯ-ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಮತ್ತು ಆದೇಶ ಪ್ರತಿಗಳನ್ನು ಎಲ್ಲರಿಗೂ ಒದಗಿಸಬೇಕು ಎಂದು ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಸಲಹೆ ನೀಡಿದರು.
ಏಕಗವಾಕ್ಷಿ ಮೂಲಕ ಎಚ್.ಐ.ವಿ. ಮತ್ತು ಟಿ.ಬಿ. ಸೋಂಕಿತ ಮತ್ತು ಬಾಧಿತರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಒದಗಿಸುವ ಉದ್ಧೇಶವಿದೆ. ಇದಕ್ಕಾಗಿ ವಿವಿಧ ಇಲಾಖೆಗಳ ನೆರವು ಮತ್ತು ಸಮನ್ವಯದ ಅಗತ್ಯವಿದೆ ಎಂದು ಜಿಲ್ಲಾ ಎಚ್.ಐ.ವಿ/ಏಡ್ಸ್ ನಿಯಂತ್ರಣಾಧಿಕಾರಿಯೂ ಆಗಿರುವ ಜಿಲ್ಲಾ ಕ್ಷಯರೋಗ ನಿಂತ್ರಣಾಧಿಕಾರಿ ಅನಿಲ್ ಕೊರಬು ಹೇಳಿದರು.
ಅಪಾಯದ ಅಂಚಿನಲ್ಲಿರುವ ಲೈಂಗಿಕ ಕಾರ್ಯಕರ್ತೆಯರು, ತೃತೀಯಲಿಂಗಿಗಳು, ಸೋಂಕಿತರು, ಮಕ್ಕಳಿಗೆ ಅಗತ್ಯ ನೆರವು ಸೌಲಭ್ಯ ನೀಡಲು ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರಲ್ಲದೇ ವಿವಿಧ ಇಲಾಖೆಗಳಿಂದ ಅಗತ್ಯವಿರುವ ನೆರವು ಮತ್ತು ಸಮನ್ವಯದ ಬಗ್ಗೆ ಸಭೆಗೆ ವಿವರಿಸಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ನೀಲಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಸವರಾಜ ತುಕ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕಾರ್ಮಿಕ ಅಧಿಕಾರಿ ತರನ್ನುಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ