Kannada NewsKarnataka NewsLatest

ತಂಬಾಕು ಮಾರಾಟ; ಲೈಸೆನ್ಸ್ ರದ್ದು ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಂಡ ವಿಧಿಸಿದ ಬಳಿಕವೂ ನಿಯಮಾವಳಿ ಮೀರಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಲೈಸೆನ್ಸ್ ರದ್ದು ಮಾಡುವುದರ ಜತೆಗೆ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ನ.26) ನಡೆದ ಕೋಟ್ಪಾ ಕಾಯ್ದೆ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕ್ಷಕರು ಸೇರಿದಂತೆ ಎಲ್ಲ ಸರ್ಕಾರಿ ನೌಕರರು ತಂಬಾಕು ಮಾರಾಟ ತಡೆಯಲು ಕೈಜೋಡಿಸಬೇಕು. ಕೋಟ್ಪಾ ಕಾಯ್ದೆಯಡಿ ಹೆಚ್ಚು ಹೆಚ್ಚು ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ನೇತೃತ್ವದಲ್ಲಿ ದಾಳಿ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕೂಡ ಅಗತ್ಯ ನೆರವು ನೀಡಬೇಕು. ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ(ಕೋಟ್ಪಾ) ಕಾಯ್ದೆಯ ಸೆಕ್ಷನ್ 4 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸೆಕ್ಷನ್ 5 ರ ಪ್ರಕಾರ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ನಿಷೇಧಿತವಾಗಿದ್ದು, ಸೆಕ್ಷನ್ 6(ಎ) ಅನ್ವಯ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿರುವುದರಿಂದ ಇದು ಕಡ್ಡಾಯವಾಗಿ ಜಾರಿಗೆ ತರಲು ಎಲ್ಲ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು. ಜಿಲ್ಲೆಯ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿತಾಣಗಳಲ್ಲಿ ತಂಬಾಕು ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿ ತಾಲ್ಲೂಕಿನಲ್ಲಿ ಈ ರೀತಿಯ ಕಠಿಣ ಕ್ರಮ ಕೈಗೊಂಡರೆ ಕಾನೂನುಬಾಹಿರ ಮಾರಾಟ ತಡೆಗಟ್ಟಬಹುದು ಎಂದರು.ಕೈಗಾರಿಕೆಗಳ ಆವರಣದಲ್ಲಿ ತಂಬಾಕು, ಸಿಗರೇಟು ಸೇವನೆ ನಿಯಂತ್ರಣಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಬಸವರಾಜ ತುಕ್ಕಾರ ಮಾತನಾಡಿ, ಭಾರತದಲ್ಲಿ ಪ್ರತಿದಿನ ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ 2700 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿವರಿಸಿದರು. ಜಿಲ್ಲೆಯ 6000 ಕ್ಕೂ ಅಧಿಕ ಶಾಲೆಗಳಿದ್ದು, ಈ ಎಲ್ಲ ಶಾಲಾ ಆವರಣದಲ್ಲಿ ತಂಬಾಕು ಮಾರಾಟ ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ತಂಬಾಕು, ಸಿಗರೇಟು ಮಾರಾಟಕ್ಕೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದರು. ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ತಂಬಾಕು ಬೆಳೆಯ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯಲು ಕೃಷಿ ಇಲಾಖೆಯಿಂದ ಪ್ರೋತ್ಸಾಹ ಒದಗಿಸಬೇಕು ಎಂದು ಡಾ.ತುಕ್ಕಾರ್ ಮನವಿ ಮಾಡಿಕೊಂಡರು.

ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ನೀಲಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button