ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಹಂಚಿಕೆಯಾದ ಅನುದಾನ ಖರ್ಚು ಮಾಡುವುದು ಕಡ್ಡಾಯವಾಗಿದೆ. ಈ ಕಾರ್ಯಕ್ರಮಗಳ ನಿಗದಿತ ಗುರಿ ಸಾಧಿಸದ ಇಲಾಖೆಯ ಅಧಿಕಾರಿಗಳ ವಿರುದ್ಧ ನಿಯಮಾವಳಿ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜು.21) ನಡೆದ ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನದಡಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಎಸ್.ಸಿ.ಪಿ. ಯೋಜನೆಯಡಿ 325.68 ಕೋಟಿ ಹಂಚಿಕೆಯಾಗಿದೆ. ಈ ಪೈಕಿ ಬಿಡುಗಡೆಯಾದ 333.54 ಕೋಟಿ ರೂಪಾಯಿಗಳಲ್ಲಿ 246.57 ಕೋಟಿ ಖರ್ಚು ಮಾಡಲಾಗಿದೆ. ಹಂಚಿಕೆಯಾದ ಅನುದಾನಕ್ಕೆ ಶೇ.76 ಮತ್ತು ಬಿಡುಗಡೆಯಾದ ಅನುದಾನದಲ್ಲಿ ಶೇ.74 ರಷ್ಟು ಸಾಧನೆಯಾಗಿದೆ.
ಅದೇ ರೀತಿ ಟಿಎಸ್ ಪಿ ಯೋಜನೆಯಡಿ 91.67 ಕೋಟಿ ಹಂಚಿಕೆಯಾಗಿದ್ದು, 89.60 ಕೋಟಿ ಬಿಡುಗಡೆಯಾಗಿರುತ್ತದೆ. ಇದರಲ್ಲಿ 63 ಕೋಟಿ ಖರ್ಚಾಗಿದ್ದು, ಒಟ್ಟಾರೆ ಶೇ. 71 ಸಾಧನೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ:
ಮಾರ್ಚ್ ಅಂತ್ಯಕ್ಕೆ ಗುರಿ ಸಾಧಿಸದೇ ಇರುವ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಭಾ ಸೂಚನಾಪತ್ರ ನೀಡಿದಾಗ್ಯೂ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೂ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಗುರಿಸಾಧಿಸದ ಇಲಾಖೆಗಳ ಪಟ್ಟಿ ಮಾಡಿ ಗುರಿಸಾಧಿಸದಿರುವ ಬಗ್ಗೆ ವಿವರಣೆ ಕೇಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿ ನೇರವಾಗಿ ಫಲಾನುಭವಿಗಳಿಗೆ ತಲುಪಬೇಕಾದ ಅನುದಾನವನ್ನು ಬಳಸದೇ ಇರುವುದು ಕಾನೂನು ಪ್ರಕಾರ ಅಪರಾಧ. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ತಿಳಿಸಿದರು.
ನಿಗದಿತ ಗುರಿ ಸಾಧಿಸದೇ ಇರುವ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆ ನೀಡಿದರು.
ಲಭ್ಯವಿರುವ ಅನುದಾನವನ್ನು ಫಲಾನುಭವಿಗಳ ಪಾಲಿನ ವಂತಿಕೆಯನ್ನು ಭರಿಸುವ ಮೂಲಕ ಕೂಡ ಗುರಿ ಸಾಧಿಸಬಹುದು. ಈ ನಿಟ್ಟಿನಲ್ಲಿ ಕೂಡ ಕ್ರಮ ವಹಿಸುವಂತೆ ತಿಳಿಸಿದರು.
ಮುಂಬರುವ ದಿನಗಳಲ್ಲಿ ನಿಯಮಿತವಾಗಿ ಸಭೆ ನಡೆಸಿ, ಪ್ರಗತಿ ಪರಿಶೀಲಿಸಲಾಗುವುದು ಎಂದರು. ಕೊರೊನಾ ನೆಪದಲ್ಲಿ ಗುರಿಸಾಧನೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಉಳಿಯುವಂತಿಲ್ಲ. ಆದ್ದರಿಂದ ನಿಗದಿತ ಗುರಿ ಸಾಧನೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ, ವಿವಿಧ ಇಲಾಖೆಗಳಿಗೆ ನಿಗದಿಪಡಿಸಲಾದ ಗುರಿ ಮತ್ತು ಸಾಧನೆಯ ಅಂಕಿ-ಅಂಶಗಳನ್ನು ಸಭೆಯಲ್ಲಿ ವಿವರಿಸಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆಎಚ್. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ