ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕ ಮೂಲದವರು. ಗಡಿ ವಿಚಾರವಾಗಿ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೊದಲು ಇತಿಹಾಸ ಅರಿತುಕೊಳ್ಳಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಶಿವಾಜಿಯವರ ಪೂರ್ವಜರು ಬೆಳ್ಳಿಯಪ್ಪ ಗದಗ ಜಿಲ್ಲೆ ಸೊರಟೂರಿನವರು. ಬರ ಪರಿಸ್ಥಿತಿಯಿಂದಾಗಿ ಅವರು ಮಹಾರಾಷ್ಟ್ರಕ್ಕೆ ಗುಳೆ ಹೋಗಿ ನೆಲೆಸಿದರು. ಅವರ ನಾಲ್ಕನೇ ತಲೆಮಾರಿನವರೇ ಶಿವಾಜಿ ಮಹಾರಾಜರು. ಮೊದಲು ಉದ್ಧವ್ ಠಾಕ್ರೆ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕನ್ನಡಿಗರು-ಮರಾಠಿಗರು ಸಹೋದರರಂತೆ ಬಾಳುತ್ತಿದ್ದಾರೆ. ಹೀಗಿರುವಾಗ ಅನಗತ್ಯವಾಗಿ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಜನರಲ್ಲಿ ಗೊಂದಲ ಸೃಷ್ಟಿಸುವುದ ಕೆಲಸವನ್ನು ಮಾಹಾರಾಷ್ಟ್ರ ಸಿಎಂ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಇದೇ ವೇಳೆ ಮಹದಾಯಿ ವಿಚಾರವಾಗಿ ಗೋವಾ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ನಾವು ಯಾರ ಮಾತನ್ನೂ ಕೇಳಬೇಕಿಲ್ಲ. ನಮ್ಮ ನೆಲ, ಜಲ, ಭಾಷೆ ರಕ್ಷಣೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡುತ್ತೇವೆ. ಮಹದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಸಿಎಂ ಅನಗತ್ಯ ಹೇಳಿಕೆ ಸರಿಯಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ