ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಿಕ್ಷಕ ಮತಕ್ಷೇತ್ರದ ವಿಧಾನ ಪರಿಷತ್ ನಲ್ಲಿ ಅರ್ಧಕ್ಕಿಂತ ಹೆಚ್ಚು ಶಿಕ್ಷಕರು ಬೆಳಗಾವಿಯಲ್ಲಿದ್ದಾರೆ. ಅವರ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಅಭ್ಯರ್ಥಿ ಆಯ್ಕೆಗೆ ಸಭೆ ಕರೆದು ಚರ್ಚೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಹಾಗೂ ಜಿಲ್ಲಾಧ್ಯಕ್ಷ ಎಸ್. ಎಸ್. ಮಠದ ಜಂಟಿಯಾಗಿ ಹೇಳಿದರು.
ಧರ್ಮನಾಥ್ ಭವನದಲ್ಲಿ ಬೆಳಗಾವಿ ಜಿಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಆಡಳಿತ ಮಂಡಳಿ ಮತ್ತು ಶಿಕ್ಷಕರ ಒಕ್ಕೂಟದಿಂದ ಶಿಕ್ಷಕರ ಹಾಗೂ ಆಡಳಿತ ಮಂಡಳಿಗಳ ಶೈಕ್ಷಣಿಕ ಸಮಸ್ಯೆಗಳು ಮತ್ತು ಬೇಡಿಕೆಗಳ ಚರ್ಚೆ, ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಚಿಂತನ, ಮಂಥನ ಸಭೆಯಲ್ಲಿ ಮಾತನಾಡಿ ನಮ್ಮ ಜಿಲ್ಲೆಗೆ ಪ್ರತಿನಿಧಿತ್ವದ ಕೂಗು ಕೇಳುವುದರಲ್ಲಿ ತಪ್ಪಿಲ್ಲ. ಶಿಕ್ಷಕರು ದೇಶ ಕಟ್ಟುವವರು. ಅನ್ಯಾಯದ ವಿರುದ್ಧ ಸಿಡಿದೇಳಬೇಕಿದೆ. ಶಿಕ್ಷಕರ ಅಳಲಿನ ಸಂಕೇತವನ್ನು ಶಿಕ್ಷಕ ಒಕ್ಕೂಟಗಳೇ ಸ್ಪಂದಿಸಬೇಕಿದೆ ಎಂದರು.
ಕಾಲ್ಪನಿಕ ವೇತನ ಬಡ್ತಿ ,1995-96 ರಿಂದ 2014-15 ನೇ ಸಾಲಿನ ಪ್ರಾರಂಭಿಸಲಾದ ಪ್ರಾಥಮಿಕ , ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವುದು.ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ . ( ಸರ್ಕಾರಿ 06 ಸಲ ) ಅವೈಜ್ಞಾನಿಕ ವರ್ಗಾವಣೆ ಕಾಯ್ದೆ ತಿದ್ದುಪಡಿ . ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಸೇರಿದಂತೆ ಹಲವಾರು ಸಮಸ್ಯೆ ಬಗ್ಗೆ ಧ್ವನಿ ಎತ್ತಲು ನಮಗೆ ನಮ್ಮ ನಾಯಕನನ್ನು ಆಯ್ಕೆ ಮಾಡಬೇಕಿದೆ ಎಂದರು.
ಬೆಳಗಾವಿ ಕಂದಾಯ ಜಿಲ್ಲೆಯು ಶೈಕ್ಷಣಿಕವಾಗಿ 2 ಜಿಲ್ಲೆಗಳಾಗಿದ್ದು ಬೆಳಗಾವಿ ಅಖಂಡ ಜಿಲ್ಲೆಯು ಖಾನಾಪುರ ಅನಮೋಡ ದಿಂದ ಅಥಣಿ ಕೊಟ್ಟಲಗಿವರೆಗೆ ವಿಸ್ತಾರಗೊಂಡಿದೆ. ಅನೇಕ ವೈವಿಧ್ಯತೆ ಮತ್ತು ವಿಶೇಷತೆಯಿಂದ ಕೂಡಿಕೊಂಡಿದೆ. ಅದರಲ್ಲಿ ದೈಹಿಕವಾಗಿ ಬೆಂಗ್ಳೂರ್ ನಂತರ ಅತಿ ದೊಡ್ಡ ಜಿಲ್ಲೆಯ ಹೆಗ್ಗಳಿಕೆ ಬೆಳಗಾವಿಯದು.
ಬೆಳಗಾವಿ ದೊಡ್ಡ ಜಿಲ್ಲೆ. 15 ತಾಲ್ಲೂಕುಗಳಲ್ಲಿ ಹಂಚಿಕೆಯಾಗಿರುವ ಬೆಳಗಾವಿ ಜಿಲ್ಲೆಯು ಶೈಕ್ಷಣಿಕವಾಗಿ ಹದಿನೈದು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹೊಂದಿದೆ. 2 ಉಪ ನಿರ್ದೇಶಕರ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ ಯನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಬೆಳಗಾವಿ ದಕ್ಷಿಣ ಜಿಲ್ಲೆಯಲ್ಲಿ 7 ಕ್ಷೇತ್ರ ಶಿಕ್ಷಣಾಧಿಕಾರಿಗಳಿದ್ದು; ಸರಕಾರಿ 142 ಮತ್ತು ಅನುದಾನಿತ ಅನುದಾನರಹಿತ 358 ಪ್ರೌಢಶಾಲೆಗಳನ್ನು ಹೊಂದಿರುತ್ತದೆ. ಒಟ್ಟು 500 ಪ್ರೌಢಶಾಲೆಗಳನ್ನು ಬೆಳಗಾವಿ ದಕ್ಷಿಣ ಜಿಲ್ಲೆ ಹೊಂದಿದೆ.ಒಟ್ಟು 32 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 8 ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯನ್ನು ಹೊಂದಿದ್ದು ಅದರಲ್ಲಿ ೨೧೪ ಸರಕಾರಿ ಪ್ರೌಢಶಾಲೆಗಳು, ೩೭೫ ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಯನ್ನು ಹೊಂದಿದೆ. ಒಟ್ಟು 589ಪ್ರೌಢಶಾಲೆಗಳನ್ನು ಹೊಂದಿರುತ್ತದೆ. ಒಟ್ಟು 36,000 ವಿದ್ಯಾರ್ಥಿಗಳು SSLC ಯಲ್ಲಿ ಅಭ್ಯಸಿಸುತ್ತಿದ್ದಾರೆ.
ಅದೇ ರೀತಿ ಬೆಳಗಾವಿ ಜಿಲ್ಲೆಯು ಪದವಿಪೂರ್ವ ಶಿಕ್ಷಣ ಇಲಾಖೆಯ 2 ಉಪ ನಿರ್ದೇಶಕರ ಕಚೇರಿಗಳನ್ನು ಹೊಂದಿದ್ದು ಒಟ್ಟು ಬೆಳಗಾವಿ ಜಿಲ್ಲೆಯ 30 ಸರ್ಕಾರಿ ಮತ್ತು ಅನುದಾನಿತ ಅನುದಾನರಹಿತ 136 ಒಟ್ಟು 166 ಪದವಿ ಪೂರ್ವ ವಿದ್ಯಾಲಯವನ್ನು ಹೊಂದಿರುತ್ತದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 32 ಸರ್ಕಾರಿ 170 ಅನುದಾನಿತ ಅನುದಾನರಹಿತ ಒಟ್ಟು 202 ಪದವಿಪೂರ್ವ ಮಹಾವಿದ್ಯಾಲಯ ಗಳನ್ನು ಹೊಂದಿರುತ್ತದೆ.
ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸವನ್ನು ಮಾಡುತ್ತಿರುತ್ತಾರೆ. ಬೆಳಗಾವಿ ಜಿಲ್ಲೆಯು ಪದವಿ ಮಹಾವಿದ್ಯಾಲಯ ಗಳನ್ನು ಒಟ್ಟು ಹತ್ತು ಸರಕಾರಿ ಮತ್ತು 122 ಅನುದಾನಿತ ಅನುದಾನರಹಿತ ಒಟ್ಟು 132 ಮಹಾವಿದ್ಯಾಲಯಗಳನ್ನು ಹೊಂದಿರುತ್ತದೆ.
ಲಕ್ಷಾಂತರ ವಿದ್ಯಾರ್ಥಿಗಳು ಪದವಿಯಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಎಂಜಿನಿಯರಿಂಗ್ ಮೆಡಿಕಲ್, ನರ್ಸಿಂಗ್ ಇತ್ಯಾದಿ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸರಕಾರಿ ಮತ್ತು ಅನುದಾನ ರಹಿತ ಅನುದಾನಿತ ಶಾಲೆಗಳಲ್ಲಿ ಒಟ್ಟಾರೆ 9000 ಶಿಕ್ಷಕರು ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 3500 ಉಪನ್ಯಾಸಕರು ಪದವಿ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯಾಗಿ 12000 ಶಿಕ್ಷಕ ಮತದಾರರು ನೋಂದಣಿ ಹೊಂದಿರುತ್ತಾರೆ.
ಇಷ್ಟೆಲ್ಲಾ ಮತದಾರರನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿರುವುದು ಕಂಡು ಬರುತ್ತದೆ. ಅದಕ್ಕಾಗಿ ಬೆಳಗಾವಿ ಜಿಲ್ಲೆಯ ಎಲ್ಲ ಮತದಾರರು ಬಂದು ಶಿಕ್ಷಕ ಮತದಾರ ಬಂಧುಗಳು ಇಲ್ಲೊಂದು ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಬೆಳಗಾವಿ ಜಿಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ರಾಮು ಗುಗವಾಡ ಒತ್ತಾಯಿಸಿದರು.
ಡಾ ಎ ಆರ್ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೈಸ್ ಬೋಡ್೯ ಆಫ್ ಎಜುಕೇಶನ್ ಆ್ಯಂಡ್ ಸೊಸಿಯಲ್ ವೆಲ್ ಫೆರ್ ಕಾರ್ಯದರ್ಶಿ ಫಾದರ್ ನೆಲ್ಸನ್ ಪಿಂಟೋ, ಪಿ.ಪಿ. ಬೆಳಗಾಂವಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಈ ಸಭೆಯಲ್ಲಿ ಈ ಕೆಳಕಂಡ ಶೈಕ್ಷಣಿಕ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆಯೂ ಚರ್ಚಿಸಲಾಯಿತು.
* ಕಾಲ್ಪನಿಕ ವೇತನ ಬಡ್ತಿ . ( 1987 )
* ಸನ್ 1995-96 ರಿಂದ 2014-15 ನೇ ಸಾಲಿನ ಪ್ರಾರಂಭಿಸಲಾದ ಪ್ರಾಥಮಿಕ , ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವುದು.
* ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ . ( ಸರ್ಕಾರಿ 06 ಸಲ ) ಅವೈಜ್ಞಾನಿಕ ವರ್ಗಾವಣೆ ಕಾಯ್ದೆ ತಿದ್ದುಪಡಿ . ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ .
* ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಆಗ್ನಿ ನಂದಕ ಯಂತ್ರಗಳ . ಪ್ರೌಢ ಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅನುಪಾತ
*ಜ್ಯೋತಿ ಸಂಜೀವಿನಿ ಅಥವಾ ಆರೋಗ್ಯ ವಿಮೆಯನ್ನು ಅನುದಾನಿತ ಸಿಬ್ಬಂದಿಯವರಿಗೂ ವಿಸ್ತರಿಸುವುದು . ಹಬ್ಬದ ಮುಂಗಡ ( ಖಾಸಗಿ ) ಮೃತ ಸಿಬ್ಬಂದಿಯ ಅಂತ್ಯ ಸಂಸ್ಕಾರಕ್ಕೆ ಅನುದಾನ .
* ದಿನಾಂಕ 01-06-2006 ರ ಎನ್‌ಪಿಎಸ್ ಬದಲಾಗಿ ಓಪಿಎಸ್ ಅನುದಾನಿತ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಿಗೆ ಎನ್‌ಪಿಎಸ್ ಅಥವಾ ಓಪಿಎಸ್ . ದಿನಾಂಕ 01-08-2008 ರ ನೇಮಕಾತಿ / ಬಡ್ತಿ ಹೊಂದಿದ ಶಿಕ್ಷಕರಿಗೆ ವೇತನ ಅನ್ಯಾಯ . ಕೇಂದ್ರ ಸಮಾನ ವೇತನ ಅಥವಾ 7 ನೇ ವೇತನ ಆಯೋಗದ ರಚನೆ . ಸರ್ಕಾರಿ ಆದೇಶ ದಿನಾಂಕ 02-02-2000 ರದ್ದಾದ ಹುದ್ದೆಗಳ ಮಂಜೂರಾತಿ , ಮುಖ್ಯೋಪಾಧ್ಯಾಯರಿಗೆ ಪ್ರಭಾರಿ ಭತ್ಯೆ . ( ಸರ್ಕಾರಿ ) ಅನುದಾನಿತ ಸಿಬ್ಬಂದಿಯವರಿಗೆ ಜಿಪಿಎಫ್ / ಕೆಜಿಐಡಿ ವಿಸ್ತರಿಸುವುದು . ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ ಓಟಿಎಸ್ ವರ್ಗಾವಣೆ ಜಾರಿಗೊಳಿಸುವುದು . ದಿನಾಂಕ 31-12-2021 ರ ಪೂರ್ವದಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ , ಶಾಲಾ ಮಾಹಿತಿಯನ್ನು ಎಸ್‌ಎಟಿಎಸ್‌ನಿಂದ ಪಡೆಯುವುದು ( ಮಹತ್ವದ್ದು )
* ಏಕರೂಪದ ಪರೀಕ್ಷಾ ಪದ್ಧತಿ , ಬೋಧನಾ ಕೆಲಸಕ್ಕೆ ಹೆಚ್ಚಿನ ಆದ್ಯತೆ .
ಕಂದಾಯ ದಾಖಲೆ ಮನೆಬಾಗಿಲಿಗೆ; ಇದು ಉಚಿತ ಯೋಜನೆ, ಹಣ ಕೊಡಬೇಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ