*ಬೆಳಗಾವಿ: ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳ ಬೃಹತ್ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳು ಬೆಳಗಾವಿಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ಹೆಚ್ಚಿಸಿ ಕೈಗಾರಿಕೆಗಳ ಮೇಲೆ ಅಧಿಕ ಮೊತ್ತದ ಬಿಲ್ ಹೊರೆಯ ಬರೆ ಎಳೆದಿರುವ ರಾಜ್ಯ ಸರ್ಕಾರಕ್ಕೆ ಬೆಳಗಾವಿ ಭಾಗದ ಕೈಗಾರಿಕಾ ಸಂಘಟನೆಗಳು ಎಚ್ಚರಿಕೆ ನೀಡಿದವು. ತಕ್ಷಣ ವಿದ್ಯುತ್ ಬಿಲ್ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಬೋಗಾರ್ ವೇಯ್ಸ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಯಿತು.
30% ರಿಂದ 60% ನಷ್ಟು ವಿದ್ಯುತ್ ಬಿಲ್ಲನ್ನು ಹೆಚ್ಚಿಸಿ ಈ ನಾಡಿನ ಉದ್ಯಮಗಳ ಮೇಲೆ ಹೊರೆ ಹಾಕಿರುವ ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಇಂದು ಎಲ್ಲ ಉದ್ಯಮಗಳನ್ನು ಬಂದ್ ಮಾಡಿ, ಸಾವಿರಾರು ಸಂಖ್ಯೆಯಲ್ಲಿ ಉದ್ಯಮಿಗಳು ಹಾಗೂ ನೌಕರರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿವೆ.
ಈ ಹೊರೆಯನ್ನು ವಿರೋಧಿಸಿ, ಅಕ್ಕ ಪಕ್ಕದ ರಾಜ್ಯಗಳಲ್ಲಿ ಇರುವ ಕೈಗಾರಿಕಾ ಸವಲತ್ತುಗಳನ್ನು ಪರಿಗಣಿಸಿ ಗಡಿ ಭಾಗದ ಉದ್ಯಮಗಳು ಪಕ್ಕದ ರಾಜ್ಯಗಳಿಗೆ ಸ್ಥಳಾಂತರವಾದರೆ ಕರ್ನಾಟಕದ ಲಕ್ಷಾಂತರ ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬರುವುದು ನಿಶ್ಚಿತ. ಹಾಗಾಗಿ ಹೆಚ್ಚಿನ ವಿದ್ಯುತ್ ಬಿಲ್ ಹಿಂಪಡೆದು, ಉದ್ಯಮಗಳ ಮೇಲೆ ಬಿದ್ದಿರುವ ಭಾರವನ್ನು ತಗ್ಗಿಸಿ ಉದ್ಯಮಗಳಿಗೆ ನೆರವಾಗುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ