Kannada NewsLatest

ಸೆ.17 ರಂದು ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇದೇ ಶುಕ್ರವಾರ (ಸೆ.17) ನಡೆಯಲಿರುವ ಲಸಿಕಾ ಮೇಳದ ಸಂದರ್ಭದಲ್ಲಿ ಸರಕಾರದಿಂದ ಪೂರೈಸುವ ಲಸಿಕೆಗಳನ್ನು ನಗರದ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಲಸಿಕಾ ಮೇಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.15) ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಸೆ.17 ರಂದು ರಾಜ್ಯದಲ್ಲಿ ಒಟ್ಟಾರೆ 30 ಲಕ್ಷ ಲಸಿಕೆ‌ ನೀಡುವ ಗುರಿ ಹೊಂದಲಾಗಿದೆ.‌ ಅದರಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಲಕ್ಷ ಲಸಿಕೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈ ಗುರಿ ಸಾಧನೆಗೆ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಕೂಡ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಇನ್ನೂ ಹತ್ತು ಲಕ್ಷ ಮೊದಲ ಡೋಸ್ ಲಸಿಕೆ ನೀಡುವುದು ಬಾಕಿಯಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ನೀಡಲು ಇದೊಂದು‌ ಉತ್ತಮ ಅವಕಾಶವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಪೂರೈಕೆ:

ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾಮೇಳ ಆಯೋಜಿಸಿದರೆ ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಲಸಿಕೆಗಳನ್ನು ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ‌ಹಿರೇಮಠ ಹೇಳಿದರು.

ಖಾಸಗಿ ಆಸ್ಪತ್ರೆಗಳು ನೀಡುವ ಬೇಡಿಕೆಪಟ್ಟಿಯನ್ನು ಆಧರಿಸಿ ಅಗತ್ಯವಿರುವ ಲಸಿಕೆಗಳನ್ನು ಪೂರೈಸಲಾಗುವುದು. ಖಾಸಗಿ ಆಸ್ಪತ್ರೆಗೆ ಆಗಮಿಸುವ ಜನರಿಗೆ ಉಚಿತವಾಗಿ ಲಸಿಕೆಗಳನ್ನು ನೀಡುವ ಮೂಲಕ ಎಲ್ಲರಿಗೂ ಲಸಿಕೆ‌ ನೀಡಬೇಕು ಎಂಬ ಸರಕಾರದ ಆಶಯವನ್ನು ಈಡೇರಿಸಲು ಲಸಿಕಾಕರಣ ಯಶಸ್ವಿಗೆ ಕೈಜೋಡಿಸಬೇಕು.
ಉಚಿತ ಲಸಿಕೆ ನೀಡಿದ ಬಳಿಕ ಸರಕಾರದ ಪೋರ್ಟಲ್ ಗೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಮಾಹಿತಿಯನ್ನು ಅಪಲೋಡ್ ಮಾಡಬೇಕಾಗುತ್ತದೆ.

ಲಸಿಕಾಕರಣಕ್ಕೆ ಅಗತ್ಯವಿರುವ ನರ್ಸ್ ಸಿಬ್ಬಂದಿಯನ್ನು ಕೂಡ ಒದಗಿಸಲು ಮುಂದಾಗಬೇಕು. ಕೋವಿಡ್ ಸಂದರ್ಭದಲ್ಲಿ ಅನೇಕ ಆಸ್ಪತ್ರೆಗಳು ಉತ್ತಮ ಕೆಲಸ‌ ಮಾಡಿವೆ. ಈಗ ಲಸಿಕೆ ನೀಡುವ ಮೂಲಕ ಸಾರ್ವಜನಿಕ ಕೆಲಸದಲ್ಲಿ ಕೈಜೋಡಿಸಬೇಕು ಎಂದರು.

ಜಿಲ್ಲಾಡಳಿತ ವತಿಯಿಂದ ಡಾಟಾ ಎಂಟ್ರಿ ಮಾಡುವವರನ್ನು ಒದಗಿಸಿದರೆ ಐದು ನೂರರಿಂದ ಹದಿನೈದು ನೂರು ಲಸಿಕೆ ನೀಡಲು ಸಿದ್ಧವಿರುವುದಾಗಿ ಖಾಸಗಿ ಆಸ್ಪತ್ರೆಗಳ ಪದಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಐ.ಪಿ.ಗಡಾದ ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು, ಆಡಳಿತ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ; ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button