
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೊಲೆಗೀಡಾಗಿದ್ದ ಹಿಂದೂ ಸಂಘಟನೆ ಮುಖಂಡ ಪ್ರವೀಣ ನೆಟ್ಟಾರು ಅವರ ಪತ್ನಿಗೆ ಈ ಹಿಂದಿನ ಬಿಜೆಪಿ ಸರಕಾರ ನೀಡಿದ್ದ ಗುತ್ತಿಗೆ ಆಧಾರದ ನೌಕರಿಯನ್ನು ಸಿದ್ದರಾಮಯ್ಯ ಸರಕಾರ ರದ್ದುಗೊಳಿಸಿದ ಬೆನ್ನಲ್ಲೇ ವಿವಾದವಾಗಿ ಇದೀಗ ಅವರಿಗೆ ಪುನಃ ಉದ್ಯೋಗ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.
ವಿಶೇಷ ಪ್ರಕರಣವೆಂದು ಪರಿಗಣಿಸಿ ನೂತನ್ ನೆಟ್ಟಾರು ಅವರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಆದರೆ ಇದೇ ವೇಳೆ 3 ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್ ಒಂದಕ್ಕೆ ಪ್ರವೀಣ್ ನೆಟ್ಟಾರು ಅವರು ತಿರುಗೇಟು ನೀಡಿದ್ದ ಟ್ವೀಟ್ ಒಂದು ಮತ್ತೆ ಮುನ್ನೆಲೆಗೆ ಬಂದಿದೆ.

ನಳಿನಕುಮಾರ್ ಕಟೀಲ್ ಅವರ ಕುರಿತು “ಎಲ್ಲೋ ಬೀದಿ ಅಲೆಯುತ್ತಿದ್ದ ಈ @nalinkateel ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ಟ್ವೀಟ್ ನಲ್ಲೇ ತಿರುಗೇಟು ನೀಡಿದ್ದ ಪ್ರವೀಣ ನೆಟ್ಟಾರು “ಹಂದಿಗೆ ಸ್ನಾನ ಮಾಡಿಸೋದು ಮತ್ತು ಈ @siddaramaiah ಎಂಬ ಕ್ರೂರಿಗೆ ಬುದ್ಧಿ ಹೇಳೋದು ಎರಡೂ ಒಂದೇ. @nalinkateel ಅವರ ಬಗ್ಗೆ ಮಾತನಾಡುವ ಮೊದಲು ನಿನ್ನ ಯೋಗ್ಯತೆ ಏನು ಅಂಥ ತಿಳ್ಕೊಳ್ಳೋ #ಅಂಡೆಪಿರ್ಕಿ_ಸಿದ್ದರಾಮ” ಎಂದು ಜರಿದಿದ್ದರು.
ಈ ಟ್ವೀಟ್ ಈಗ ಸಖತ್ತಾಗಿ ವೈರಲ್ ಆಗಿದ್ದು ನಾನಾ ರೀತಿಯ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.




