
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರತಿವರ್ಷ ಸಂಭವಿಸುತ್ತಿರುವ ಪ್ರವಾಹ ಮತ್ತು ಅಧಿಕ ಮಳೆಯಿಂದ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ ( ಟ್ರಾನ್ಸ್ ಫರ್ಮರ್ ) ಪೆಟ್ಟಿಗೆ, ಕಂಡಕ್ಟರ್‌ಗಳು ಹಾನಿಗೊಳಗಾಗುತ್ತಿದ್ದು, ಮುಂಜಾಗ್ರತಾವಹಿಸಿ ಈ ವಿದ್ಯುತ್ ಪರಿಕರಗಳನ್ನು ಸಂಗ್ರಹಿಸಿಟ್ಟುಕೊಂಡು, ಟ್ರಾನ್ಸ್ ಫರ್ಮರ್‌ಗಳ ಎತ್ತರವನ್ನು ಹೆಚ್ಚಿಸಿ ಪದೇ ಪದೇ ಹಾನಿಗೊಳಗಾದಂತೆ ತಾಂತ್ರಿಕ ಹಾಗೂ ಯೋಜನಾ ಬದ್ದ ಶಾಶ್ವತವಾದ ಕಾರ್ಯ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಚಿಕ್ಕೋಡಿ ಭಾಗದ ಪ್ರದೇಶದ ಹೆಚ್ಚಿನ ಗ್ರಾಮಗಳು, ಬಾಗಲಕೋಟೆ ಜಿಲ್ಲೆಯ ಬೀಳಗಿ, ಮುಧೋಳ್, ಬಾಗಲಕೋಟೆ, ಬದಾಮಿಯಲ್ಲಿ ತಾಲೂಕಿನಲ್ಲಿ ಹೆಚ್ಚಿನ ಗ್ರಾಮಗಳು ಬಾದಿತವಾಗುತ್ತಿರುವುದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಈ ಪ್ರದೇಶಗಳಲ್ಲಿ ಹಾಗೂ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿರುವ ಟ್ರಾನ್ಸ್ ಫರ್ಮರ್‌ಗಳ ಎತ್ತರವನ್ನು ಹೆಚ್ಚಿಸಿ, ಪ್ರತಿ ವರ್ಷ ಸಂಭವಿಸಬಹುದಾದ ಸಮಸ್ಯೆಯನ್ನು ತಾಂತ್ರಿಕ ಹಾಗೂ ಯೋಜನಾಬದ್ದವಾಗಿ ಪರಿಹರಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಇತರ ನಿಗಮಗಳು ಅನುಷ್ಟಾನಗೊಳಿಸುವ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುದೀಕರಣವನ್ನು ಸಕಾಲದಲ್ಲಿ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆಯು ನೀಡುವ 50 ಸಾವಿರ ರೂ ಅನುದಾನ ಕೊರತೆಯಾದರೆ ಇಂಧನ ಇಲಾಖೆಯಲ್ಲಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಈ ಯೋಜನೆಗೆ ಬಳಕೆ ಮಾಡಿಕೊಂಡು ವಿದ್ಯುದೀಕರಣ ಕಾರ್ಯವನ್ನು ಸಕಾಲದಲ್ಲಿ ಮಾಡಿದರೆ ಯೋಜನೆಯ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಡಿಸಿಎಂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಕುಮಾರ ನಾಯಕ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿದೇಶಕರಾದ ಡಾ.ಎನ್. ಮಂಜುಳ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಮವಾರದಿಂದ ರಾಜ್ಯಾದ್ಯಂತ ಅನ್ ಲಾಕ್ 3.0 ಜಾರಿ (Updated)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ