*ಬೆಳಗಾವಿಯಲ್ಲಿ ಭಾರಿ ಮಳೆ; 40ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ; ಹಬ್ಬನಹಟ್ಟಿ ಆಂಜನೇಯ ದೇವಾಲಯ ಮುಳುಗಡೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಲಾತ್ರಿ ಹಳ್ಲದ ನೀರು ಅಪಾಯದ ಮತ್ಟದಲ್ಲಿ ಹರಿಯುತ್ತಿದ್ದು, ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ನದಿಯಂತಾಗಿದೆ.

ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯ ಮಂತುರ್ಗಾ ಗ್ರಾಮದ ಬಳಿಯ ಅಲಾತ್ರಿ ಹಳ್ಳ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ಪರಿಣಾಮ ಖಾನಾಪುರ ತಾಲ್ಲೂಕಿನ ಗುಂಜಿ ಹೋಬಳಿಯ ನಲವತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಸಂಚಾರ ಕಡಿತವಾಗಿದೆ. ಹಳ್ಳದ ನೀರು ರಸ್ತೆಯ ಮೇಲೆ ನಿಂತಿರುವುದರಿಂದ ತಾತ್ಕಾಲಿಕವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ.

ಕಣಕುಂಬಿ ಅರಣ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಇಂದು ಮುಂಜಾನೆ ಖಾನಾಪುರ ತಾಲ್ಲೂಕಿನ ಜಾಂಬೋಟಿ ಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಬಹುತೇಕ ಮುಳುಗಡೆಯಾಗಿದೆ.
ಅರಣ್ಯ ಪ್ರದೇಶದಲ್ಲಿ ಮುಂದುವರೆದ ಮಳೆಯಿಂದಾಗಿ ಲೋಂಡಾ, ಕಣಕುಂಬಿ, ಭೀಮಗಡ ಮತ್ತು ಜಾಂಬೋಟಿ ಭಾಗದ ವಿವಿಧ ಗ್ರಾಮಗಳಿಗೆ ವಿದ್ಯುತ್ ಪೂರೈಸುವ ಕಂಬಗಳು ಧರೆಗುರುಳಿವೆ. ಘಟ್ಟ ಪ್ರದೇಶದಲ್ಲಿ ಮಳೆಯೊಂದಿಗೆ ಜೋರಾಗಿ ಬೀಸುವ ಗಾಳಿಗೆ ನೂರಾರು ಮರಗಳು, ೨೦ ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಕಂಬಗಳನ್ನು ಬದಲಾಯಿಸಲು ಜೋರಾಗಿ ಬೀಸುವ ಗಾಳಿ ಮತ್ತು ಮಳೆ ಅಡಚಣೆ ಉಂಟುಮಾಡಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಪಂ ಸಿಬ್ಬಂದಿ ಉರುಳಿ ಬಿದ್ದ ಮರಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ