Kannada NewsLatest

ಮೈತ್ರಿ ಕ್ಲಬ್ ನಿಂದ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಮಹಿಳಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ “ಮೈತ್ರಿ” ಕ್ಲಬ್ ಪ್ರತಿ ಬಾರಿಗಿಂತಲೂ ಭಿನ್ನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದು, ಈ ಬಾರಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಕೈದಿಗಳೊಂದಿಗೆ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ನಾವು ಸಾಮಾನ್ಯವಾಗಿ ಚಲನಚಿತ್ರ ಗಳಲ್ಲಿ ನೋಡುವ ಕಾರಾಗೃಹಗಳಿಗಿಂತ ಹಿಂಡಲಗಾ ಕೇಂದ್ರ ಕಾರಾಗೃಹ ಸಂಪೂರ್ಣವಾಗಿ ಭಿನ್ನವಾಗಿದೆ. ಕೈದಿಗಳ ಸಂಕಷ್ಟದ ಸಮಯದಲ್ಲಿ ಅವರ ಮನ ಪರಿವರ್ತನೆ ಮಾಡಿ ಜೀವನದ ಮುಖ್ಯ ವಾಹಿನಿಗೆ ತರುವ ಮಾರ್ಗದರ್ಶಕರಿರುವ ಸುಧಾರಣಾ ಕೇಂದ್ರದಂತೆ ಕಾರಾಗೃಹ ಕಾರ್ಯ ನಿರ್ವಹಿಸುತ್ತದೆ.ಕಾರಾಗೃಹ ದಲ್ಲಿ ಮಹಿಳಾ ದಿನವನ್ನು ಆಚರಿಸಿದ್ದು ಅಧೀಕ್ಷಕರು ,ಮಹಿಳಾ ಅಧಿಕಾರಿಗಳು ಮತ್ತು ಕೈದಿಗಳಲ್ಲಿ ಸಂತೋಷ ತಂದಿತು.

ಇದೇ ದಿನ ಮಹಿಳಾ ಕೈದಿಗಳಿಗಾಗಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಬಿಮ್ಸನ ತಜ್ಞ ವೈದ್ಯೆ ಮತ್ತು ಸಹ ಪ್ರಾಧ್ಯಾಪಕರಾಗಿರುವ ಡಾ.ಸುನೀತಾ ಕಿತ್ತಳಿ,ಡಾ.ಸನ್ಮತಿ,ನರ್ಸಿಂಗ್ ಅಧಿಕಾರಿಗಳಾಗಿರುವ ವಿಜಯಮಾಲಾ ಮತ್ತು ರಾಜಶ್ರೀ ಶಿಬಿರದಲ್ಲಿ ತಪಾಸಣೆ ನಡೆಸಿದರು.

ಒಟ್ಟು 32 ಮಹಿಳೆಯರ ಕ್ಯಾನ್ಸರ್ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ನೀಡಲಾಯಿತು. ಇಬ್ಬರು ಬಾಣಂತಿಯರು ಸೇರಿದಂತೆ ಕೈದಿಗಳಿಗೆ ಐರನ್ ,ಕ್ಯಾಲ್ಸಿಯಂ ,ಮಲ್ಟಿ ವಿಟಮಿನ್ ಮಾತ್ರೆಗಳು,ಕಣ್ಣಿನ ಡ್ರಾಪ್ಸ್ ಮತ್ತು ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪಕಿನ್ ಗಳನ್ನು ವಿತರಿಸಲಾಯಿತು.

ಇದರೊಂದಿಗೆ ಕೈದಿಗಳಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಡಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಮುಂಬರಲಿರುವ ಯುಗಾದಿ ಹಬ್ಬದ ಸಂದರ್ಭವಾಗಿ ಹೊಸ ಸೀರೆ ,ಉಡುಪು ಮತ್ತು ಅಗತ್ಯ ವಸ್ತುಗಳನ್ನು ವಿತರಿಸಲಾಯಿತು .ಒಟ್ಟಾರೆ ಮಹಿಳಾ ದಿನಾಚರಣೆಯಂದು ಜೈಲು ಹಕ್ಕಿಗಳ ಮೊಗದಲ್ಲಿ ನಗೆ ಅರಳಿಸಲಾಯಿತು.

ಈ ಸಂದರ್ಭದಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿರುವ ಶಮ್ಸುದ್ದೀನ್ ಸಾಬ್ ,ಮೈತ್ರಿ ಕ್ಲಬ್ ಅಧ್ಯಕ್ಷೆ ಮೈತ್ರೇಯಿ ಬಿಶ್ವಾಸ್ ,ಉಪಾಧ್ಯಕ್ಷೆ ತನುಜಾ ಹಿರೇಮಠ, ಸಾಂಸ್ಕೃತಿಕ ಕಾರ್ಯದರ್ಶಿ ನಂದಾ ಗಾರ್ಗಿ,ಸಹ ಕಾರ್ಯದರ್ಶಿ ಆರತಿ ಅಂಗಡಿ ,ಖಜಾಂಚಿ ಗೀತಾ ಬ್ಯಾಕೋಡ ,ಸಹ ಖಜಾಂಚಿ ಲತಾ ಅಡಕಿ ಮತ್ತು ಕ್ಲಬ್ ನ ಸದಸ್ಯೆಯರು ಉಪಸ್ಥಿತರಿದ್ದರು .
https://pragati.taskdun.com/latest/mysoredaksha-collegeannouncesmenstruation-leave-women/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button