ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಶ್ರೀನಗರದ ವಂಟಮುರಿ ಕಾಲನಿಯಲ್ಲಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮಕ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕ ಅನಿಲ್ ಬೆನಕೆ ಮಂಗಳವಾರ(ನ.17) ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಲ್ಲಿನ ಶ್ರೀನಗರದ ಡಬಲ್ ರಸ್ತೆಯಲ್ಲಿರುವ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.75 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರಿಂದ ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ 30 ಹಾಸಿಗೆಗಳ ನೂತನ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ, ನವಜಾತ ಶಿಶು ತುರ್ತು ನಿಗಾ ಘಟಕ ಸೇರಿದಂತೆ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.
ಇದಲ್ಲದೆ ಸುಸಜ್ಜಿತ 30 ಹಾಸಿಗೆಗಳ ವಿಶ್ರಾಂತಿ ಘಟಕ, ಹೆರಿಗೆ-ಶಿಶುಗಳ ತಜ್ಞ ವೈದ್ಯರುಗಳ ಕೊಠಡಿಗಳು; ನವಜಾತ ಶಿಶು ಆರೈಕೆ ಘಟಕ; ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಕೊಠಡಿ; ಅಗ್ನಿ ನಿರೋಧಕ ಸೌಲಭ್ಯವುಳ್ಳ ಕೊಠಡಿಗಳು; ಚುಚ್ಚುಮದ್ದು, ಶ್ರವಣಾತೀತ ಧ್ವನಿ ಕೊಠಡಿ ಹಾಗೂ ಪ್ರಸವಪೂರ್ವ ಕೊಠಡಿಗಳನ್ನು ಆಸ್ಪತ್ರೆಯು ಒಳಗೊಂಡಿದೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ