Latest

48ನೇ ಮಾಸಿಕ ಸುವಿಚಾರ ಚಿಂತನ ಹಾಗೂ ಕನ್ನಡಪರ ಹೋರಾಟಗಾರರಿಗೆ ಗೌರವಾಭಿನಂದನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಕನ್ನಡ ಪರಂಪರೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ವಿವಿಧ ಭಾಷೆ, ಸಂಸ್ಕೃತಿಗಳ ನಮ್ಮ ದೇಶ ಸ್ವಾತಂತ್ರ ನಂತರ ನಮ್ಮ ದೇಶದ ಎಲ್ಲ ಭಾಷೆಗಳನ್ನು ರಕ್ಷಿಸುವುದಕ್ಕಾಗಿ ಭಾಷಾವಾರು ರಾಜ್ಯಗಳು ಉದಯಿಸಿದವು. ಕರ್ನಾಟಕ ರಾಜ್ಯದಲ್ಲಿ ಬಹು ಭಾಷೆ, ಬಹು ಸಂಸ್ಕೃತಿಗಳ ಜನರಿದ್ದರೂ ಅವರೆಲ್ಲರ ಮೊದಲ ಆದ್ಯತೆ ಕನ್ನಡವಾಗಬೇಕು” ಎಂದು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್.ಪಾಟೀಲ ಅವರು ಅಭಿಪ್ರಾಯಪಟ್ಟರು.

ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಜರುಗಿದ 48ನೇ ಮಾಸಿಕ ಸುವಿಚಾರ ಚಿಂತನ ಹಾಗೂ ಕನ್ನಡಪರ ಹೋರಾಟಗಾರರಿಗೆ ಗೌರವಾಭಿನಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ” ಕನ್ನಡ ಸಂಸ್ಕೃತಿ ಎಂದರೆ ನೆಲ ಸಂಸ್ಕೃತಿಯಾಗಿದೆ. ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ಮತ್ತಷ್ಟು ಗಟ್ಟಿಯಾಗಬೇಕು. ಆ ನಿಟ್ಟಿನಲ್ಲಿ ಕನ್ನಡದ ಎಲ್ಲ ಮನಸುಗಳು ಹೆಜ್ಜೆ ಇಡಬೇಕು” ಎಂದು ಹೇಳಿದರು.

ಕರ್ನಾಟಕ ವಿಧಾನ ಸೌಧದ ರಾಜ್ಯೋತ್ಸವದ ಗೌರವ ಸ್ವೀಕರಿಸಿದ ಕನ್ನಡ ಹಿರಿಯ ಹೋರಾಟಗಾರ ಅಶೋಕ ಚಂದರಗಿ ಅವರು ಮಾತನಾಡಿ,” ಕರ್ನಾಟಕದ ಏಕೀಕರಣದಿಂದ ಮೊದಲುಗೊಂಡು ಕಿತ್ತೂರು ಕರ್ನಾಟಕದ ಕನಸು ನನಸಾದ ಕ್ಷಣದವರೆಗೆ ಮೂರು ತಲೆಮಾರುಗಳು ಹೋರಾಟದ ರಥವನ್ನು ಇಂದಿನ ನಾಲ್ಕನೇ ತಲೆಮಾರಿನವರು ಎಳೆಯಲು ಸಿದ್ಧರಾಗಿದ್ದಾರೆ. ಅವರಿಗೆ ಬೆನ್ನೆಲುಬಾಗಿ ನಾವೆಲ್ಲ ನಿಲ್ಲಬೇಕು” ಎಂದರು.

ಸಾನಿಧ್ಯ ವಹಿಸಿದ್ದ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ, “ಕಿತ್ತೂರು ಸಂಸ್ಥಾನ ಮೊದಲಿನಿಂದಲೂ ಕನ್ನಡ ಮಣ್ಣಿಗಾಗಿ ಹೋರಾಟ ಮಾಡಿದೆ. ಅದರ ಫಲವಾಗಿ ಬ್ರಿಟಿಷರ ಕಾಲದಿಂದ ಮುಂಬಯಿ ಕರ್ನಾಟಕವಾಗಿದ್ದ ನಮ್ಮ ಭಾಗಕ್ಕೆ ಕಿತ್ತೂರು ಕರ್ನಾಟಕವಾದದ್ದು ಅನೇಕ ಹಿರಿಯ, ಕಿರಿಯ ಕನ್ನಡ ಹೋರಾಟಗಾರರ ಹೋರಾಟದ ಫಲವಾಗಿದೆ. ಅಂಥ ಕನ್ನಡದ ಕಟ್ಟಾಳುಗಳಿಗೆ ಬೆಂಗಾವಲಾಗಿ ನಾವೆಲ್ಲ ನಿಲ್ಲುತ್ತೇವೆ” ಎಂದರು.

ನೇತೃತ್ವ ವಹಿಸಿದ್ದ ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ” ಕನ್ನಡ ಕೇವಲ ಕಂಠದ ಭಾಷೆಯಾಗದೆ ಕರುಳಿನ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು. ಅಂದಾಗ ಮಾತ್ರ ಕರ್ನಾಟಕದ ಸರ್ವಾ0ಗೀಣ ಅಭಿವೃದ್ಧಿ ಸಾಧ್ಯ. ಇಂದಿನ ಪೀಳಿಗೆ ಕನ್ನಡ ಹೋರಾಟದ ತೇರು ಎಳೆಯಲು ಸನ್ನದ್ಧರಾಗಿದ್ದಾರೆ. ಅಂಥ ಯುವ ಶಕ್ತಿಯನ್ನು ಗುರುತಿಸುವ ಕೆಲಸವಾಗಬೇಕು” ಎಂದರು.

ಕಾರ್ಯಕ್ರಮದಲ್ಲಿ ಭಜರಂಗಿ-2 ಚಲನಚಿತ್ರದ ಖ್ಯಾತ ನಟ ವಜ್ರಗಿರಿಯವರನ್ನು ಶಾಲು ಹೊದಿಸಿ ಸತ್ಕಾರಿಸಲಾಯಿತು. ಬೆಳಗಾವಿಯ ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಮೈನುದ್ದಿನ ಮಕಾನದಾರ, ಶಿವಪ್ಪ ಶಮರಂತ, ಮಹಾಂತೇಶ ರಣಗಟ್ಟಿಮಠ, ಶಂಕರ ಬಾಗೇವಾಡಿ, ರಾಜು ಕೋಲಾ, ಅನಂತ ಬ್ಯಾಕೋಡ, ಶ್ರೀನಿವಾಸ ತಾಳೂಕರ ಮುಂತಾದ ಮೂವತ್ತೇಳು ಹೋರಾಟಗಾರರನ್ನು ಗೌರವಿಸಲಾಯಿತು. ಶ್ರೀಮಠದ ವಿರೂಪಾಕ್ಷಯ್ಯ ನೀರಲಗಿಮಠ ಕಾರ್ಯಕ್ರಮ ನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button