*ಬೆಳಗಾವಿಗೆ ಹೊಸ ಯೋಜನೆ ಘೋಷಿಸಿದ ಜಿಲ್ಲಾ ಉಸ್ತುವಾರಿ ಸಚಿವ*
ಸ್ವಾತಂತ್ರ್ಯ ಹೋರಾಟಗಾರರ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಸಚಿವ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ. ಮಹಾತ್ಮಾ ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರಿ, ಬಾಲಗಂಗಾಧರ ಟಿಳಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಮಂಗಳವಾರ (ಆ.15) ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹನ ನೆರವೇರಿಸಿ ಅವರು ಸಂದೇಶ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದಳು.
ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು ವೀರಮರಣವನ್ನಪ್ಪಿದ್ದು ಜನವರಿ 26.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು ಶ್ರೀ ಗಂಗಾಧರ ದೇಶಪಾಂಡೆ. ‘ಕರ್ನಾಟಕದ ಸಿಂಹ’ ಹಾಗೂ ‘ಕರ್ನಾಟಕದ ಖಾದಿ ಭಗೀರಥ’ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರನ್ನು ಇಂದು ನಾವು ನೆನಪಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಐಜಿಪಿ ವಿಕಾಸ್ ಕುಮಾರ್ ವಿಕಾಸ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ನಗರ ಪೊಲೀಸ್ ಆಯುಕ್ತರಾದ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಮತ್ತಿತರ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ:
ಎಲ್ಲರಿಗೂ ನಮಸ್ಕಾರ,
77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಸ್ವಾತಂತ್ರ್ಯ ಹೋರಾಟಗಾರರೇ, ಜಿಲ್ಲೆಯ ಸಮಸ್ತ ಚುನಾಯಿತ ಪ್ರತಿನಿಧಿಗಳೇ, ಗಣ್ಯಮಾನ್ಯರೇ, ಎಲ್ಲಾ ಆಮಂತ್ರಿತರೇ, ಅಧಿಕಾರಿ ವರ್ಗದವರೇ, ನಾಗರಿಕ ಬಂಧುಗಳೇ ಮಾಧ್ಯಮದ ಸ್ನೇಹಿತರೇ ಹಾಗೂ ಮುದ್ದು ಮಕ್ಕಳೇ..
ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
‘ಸ್ವಾತಂತ್ರಂತ್ರ್ಯ’ ಎಂದರೆ ಸ್ವಾಭಿಮಾನ. ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಇಂತಹ ಸ್ವಾಭಿಮಾನವನ್ನು ತಂದುಕೊಟ್ಟ ಮಹನೀಯರನ್ನು ಇಂದು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ. ದೇಶ ಸ್ವತಂತ್ರಗೊಂಡು ಇಂದಿಗೆ 76 ವರ್ಷಗಳಾದವು.
ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ ಎಂದರೆ ತಪ್ಪಾಗಲಾರದು.
ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರಿ, ಬಾಲಗಂಗಾಧರ ಟಿಳಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಪಾತ್ರವು ಕಡಿಮೆ ಇಲ್ಲ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದಳು.
ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು ವೀರಮರಣವನ್ನಪ್ಪಿದ್ದು ಜನವರಿ 26.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು ಶ್ರೀ ಗಂಗಾಧರ ದೇಶಪಾಂಡೆ. ‘ಕರ್ನಾಟಕದ ಸಿಂಹ’ ಹಾಗೂ ‘ಕರ್ನಾಟಕದ ಖಾದಿ ಭಗೀರಥ’ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರನ್ನು ಇಂದು ನಾವು ನೆನಪಿಸಿಕೊಳ್ಳಬೇಕು.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಇಟ್ಟಿದೆ.
ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿದೆ.
ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಐದು “ಗ್ಯಾರಂಟಿ ಯೋಜನೆ”ಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವುದರ ಜತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 350 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಸ್ತೆ ಮೇಲ್ಸೆತುವೆ ಹಾಗೂ ಸದ್ಯಕ್ಕೆ ಇರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಿಸಲು ಉದ್ಧೇಶಿಸಲಾಗಿದೆ. ಬೆಳಗಾವಿ ನಗರ ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
*****
ಶಕ್ತಿ ಯೋಜನೆ-
ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬುವ ಆಶಯದೊಂದಿಗೆ “ಶಕ್ತಿ” ಯೋಜನೆಯನ್ನು 11-06-2023 ರಂದು ಆರಂಭಿಸಲಾಗಿರುತ್ತದೆ.
ಶಕ್ತಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ 13-8-2023 ರವರೆಗೆ ಒಟ್ಟು 3.48 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆ ವಿತರಿಸಲಾಗಿರುವ ಶೂನ್ಯ ಟಿಕೆಟ್ ಮೊತ್ತ ಒಟ್ಟಾರೆ 67.07 ಕೋಟಿ ರೂಪಾಯಿಯಾಗಿರುತ್ತದೆ.
ಆರೋಗ್ಯ, ಶಿಕ್ಷಣ, ಪ್ರವಾಸ, ಧಾರ್ಮಿಕ ಹಾಗೂ ದೈನಂದಿನ ಉದ್ಯೋಗ ಸಂಬಂಧಿತ ಕೆಲಸಗಳಿಗೆ ಹೆಚ್ಚು ಮಹಿಳೆಯರು “ಶಕ್ತಿ” ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ.
ಅನ್ನಭಾಗ್ಯ-
“ಹಸಿವು ಮುಕ್ತ ಕರ್ನಾಟಕ ಇದು ನಮ್ಮ ಸರರ್ಕಾರದ ಮುಖ್ಯ ಧ್ಯೇಯವಾಗಿದ್ದು, ಇದಕ್ಕಾಗಿ ರಾಜ್ಯ ಸರರ್ಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲ ಕಾರಣಗಳ ಹಿನ್ನೆಲೆಯಲ್ಲಿ ಕಳೆದ ಜುಲೈ-2023ರ ಮಾಹೆಯಿಂದ ಐದು ಕೆ.ಜಿ ಅಕ್ಕಿಯ ಜೊತೆಗೆ ಇನ್ನುಳಿದ ಐದು ಕೆ.ಜಿಯ ಅಕ್ಕಿ ಮೊತ್ತಕ್ಕೆ ಸಮನಾಗಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ರೂ.170 ರಂತೆ ಡಿ.ಬಿ.ಟಿ(ನೇರ ನಗದು ವರ್ಗಾವಣೆ) ಮೂಲಕ ಹಣ ಜಮೆ ಮಾಡಲಾಗಿರುತ್ತದೆ.
ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ 1834 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪ್ರತಿ ಮಾಹೆ POS ಮೂಲಕ ಪಡಿತರ ವಿತರಣೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಸದ್ಯ ಜಿಲ್ಲೆಯಲ್ಲಿ 68,589 ಅಂತ್ಯೋದಯ ಅನ್ನ ಯೋಜನೆ, 10,78,881 ಪಿ.ಎಚ್.ಎಚ್(ಆದ್ಯತಾ ಕುಟುಂಬ) ಹಾಗೂ 3,21,588 ಎನ್.ಪಿ.ಎಚ್.ಎಚ್(ಆದ್ಯತೇತರ ಕುಟುಂಬ) ಹೀಗೆ ಒಟ್ಟು ಸೇರಿ 14,69,058 ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಅನ್ನಭಾಗ್ಯ ಯೋಜನೆಯಡಿ ಒಟ್ಟು 37,40,711 ಫಲಾನುಭವಿಗಳು ಪ್ರತಿ ಮಾಹೆ ಉಚಿತವಾಗಿ ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಈ ಯೋಜನೆಗೆ ಪ್ರತಿ ಮಾಹೆ 20000 ಮೆಟ್ರಿಕ್ ಟನ್ ಅಕ್ಕಿ ಹಾಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಜಮೆ ಮಾಡಲು 58.49 ಕೋಟಿ ಅನುದಾನ ಸರರ್ಕಾರದಿಂದ ವೆಚ್ಚ ಮಾಡಲಾಗುತ್ತಿದೆ.
ಗೃಹಜ್ಯೋತಿ-
2-6-2023 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ “ಗೃಹಜ್ಯೋತಿ” ಯೋಜನೆಗೆ ಒಪ್ಪಿಗೆಯನ್ನು ನೀಡಿದ್ದು, ರಾಜ್ಯದಲ್ಲಿನ ಪ್ರತಿ ಮನೆಗೆ ಸರಾಸರಿ ಬಳಕೆಯ ಆಧಾರದ ಮೇಲೆ ಗರಿಷ್ಠ 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
‘ಉಚಿತ ಬೆಳಕು ಸುಸ್ಥಿರ ಬದುಕು’ ಧ್ಯೇಯದೊಂದಿಗೆ ಗೃಹಜ್ಯೋತಿ ಯೋಜನೆಯನ್ನು ಗ್ಯಾರಂಟಿ ಯೋಜನೆಯಾಗಿ ಆರಂಭಿಸಲಾಗಿದೆ.
ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿಯ ಸುಮಾರು 1.93 ಲಕ್ಷ ವಿದ್ಯುತ್ ಗೃಹ ಬಳಕೆದಾರರಿದ್ದಾರೆ. ಅದೇ ರೀತಿ 8.52 ಲಕ್ಷ ಸಾಮಾನ್ಯ ಗೃಹ ಬಳಕೆದಾರರಿದ್ದಾರೆ.
ಒಟ್ಟಾರೆ 10,35,163 ಗೃಹ ಬಳಕೆದಾರರ ಪೈಕಿ ಸರಕಾರದ ಮಹತ್ವಾಕಾಂಕ್ಷೆಯ “ಗೃಹಜ್ಯೋತಿ” ಯೋಜನೆಯಡಿ 9,97,878 ಅರ್ಹ ಫಲಾನುಭವಿಗಳಿದ್ದು, ಇದುವರೆಗೆ 8,25,700 ಬಳಕೆದಾರರು ನೋಂದಣಿ ಮಾಡಿಕೊಂಡು “ಗ್ಯಾರಂಟಿ” ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮೀ-
ಗೃಹಲಕ್ಷ್ಮೀ ಯೋಜನೆಯು ದಿನಾಂಕ: 19/07/2023 ರಂದು ಪಾರಂಭವಾಗಿದ್ದು, ಈ ಯೋಜನೆಯ ಮುಖಾಂತರ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2,000/- ಗಳನ್ನು ನೇರವಾಗಿ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರ/ ಕರ್ನಾಟಕ ಒನ್ ಸೇವಾ ಕೇಂದ್ರ/ ಯು.ಎಲ್.ಬಿ. ಕೇಂದ್ರಗಳ ಮುಖಾಂತರ ನೋಂದಣಿ ಕಾರ್ಯವು ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 11,87,469 ಪಡಿತರ ಚೀಟಿಗಳಲ್ಲಿ ಮಹಿಳೆಯರನ್ನು ಯಜಮಾನತಿ ಎಂದು ನಮೂದಿಸಲಾಗಿರುತ್ತದೆ. ಇಷ್ಟು ಫಲಾನುಭವಿಗಳ ಪೈಕಿ ಆಗಸ್ಟ್ 12, 2023 ರವರೆಗೆ ಒಟ್ಟು 9,70,833 ಮಹಿಳೆಯರು “ಗೃಹಲಕ್ಷ್ಮೀ” ಯೋಜನೆಯಡಿ ತಮ್ಮ ಹೆಸರು ನೋಂದಾಯಿಸಿಕೊಂಡಿರುತ್ತಾರೆ. ಜಿಲ್ಲೆಯ ಎಲ್ಲ 11.87 ಲಕ್ಷ ಮಹಿಳೆಯರಿಗೆ ಈ ಯೋಜನೆಯ ಲಾಭ ತಲುಪಲಿದೆ.
ಯುವನಿಧಿ-
2022-23 ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅವರು ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಅಥವಾ 6 ತಿಂಗಳು ಕಳೆದರೂ ಉದ್ಯೋಗ ದೊರೆಯದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಮತ್ತು ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ರೂಪಾಯಿ ನಿರುದ್ಯೋಗ ಭತ್ಯೆಯನ್ನು “ಯುವನಿಧಿ” ಗ್ಯಾರಂಟಿ ಯೋಜನೆಯಡಿ ನೀಡಲಾಗುತ್ತಿದೆ.
ಉದ್ಯೋಗ ಸಿಗುವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ಈ ಭತ್ಯೆಯನ್ನು ನೀಡಲಾಗುವುದು. ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸದರಿ ಯೋಜನೆಗೆ ಸಂಬಂಧಿಸಿದಂತೆ ಜುಲೈ ಅಂತ್ಯದವರೆಗೆ ಒಟ್ಟು 16,849 ನಿರುದ್ಯೋಗಿಗಳು ನೋಂದಣಿ ಮಾಡಿರುತ್ತಾರೆ.
****
ಜೂನ್ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಮಳೆ ಕೊರತೆ ಉಂಟಾಗಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಲು ಸ್ವಲ್ಪ ಹಿನ್ನಡೆಯಾದರೂ ಸಹ, ಜುಲೈ ತಿಂಗಳಲ್ಲಿ ಬಂದಂತಹ ಉತ್ತಮ ಮಳೆಯಿಂದ ರೈತರಿಗೆ ಅನುಕೂಲಕರವಾಗಿ ಈಗ ಬಿತ್ತನೆ ಕಾರ್ಯ ಚುರುಕುಗೊಂಡಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು 7.11 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು 6.19 ಲಕ್ಷ ಹೆಕ್ಟೇರ್ ಅಂದರೆ ಶೇ. 87% ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಕಾರ್ಯಕ್ಕೆ ಬೇಕಾಗುವ ಉತ್ತಮ ಗುಣಮಟ್ಟದ 19284 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಸುಮಾರು 76 ಸಾವಿರ ರೈತರಿಗೆ ಸಕಾಲದಲ್ಲಿ ಪೂರೈಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ತಡವಾಗಿ ಪ್ರಾರಂಭವಾದರೂ ಸಹ ಜಿಲ್ಲೆಗೆ ಅವಶ್ಯವಿರುವ ಪರ್ಯಾಯ ಬೆಳೆಗಳ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಬೇಡಿಕೆಗೆ ತಕ್ಕಂತೆ ದಾಸ್ತಾನೀಕರಿಸಲಾಗಿದೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸಂಬಂಧಿಸಿದಂತೆ 397 ರೈತರಿಗೆ ರೂ.29.42 ಲಕ್ಷಗಳ ಪರಿಹಾರವನ್ನು ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ ಖಾತೆಗಳಿಗೆ ಸಂದಾಯ ಮಾಡಲಾಗಿರುತ್ತದೆ.
ಇತ್ತೀಚಿನ ಮಳೆಯಿಂದಾಗಿ ಬೈಲಹೊಂಗಲ-1 ಅಥಣಿ-1 ಹೀಗೆ ಒಟ್ಟು 2 ಮಾನವ ಜೀವ ಹಾನಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ ವಾರಸುದಾರರಿಗೆ ರೂ. 5 ಲಕ್ಷಗಳಂತೆ ಒಟ್ಟು ರೂ. 10 ಲಕ್ಷಗಳನ್ನು ಆರ್.ಟಿ.ಜಿ.ಎಸ್ ಮೂಲಕ ಬಿಡುಗಡೆ ಮಾಡಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2023-24 ನೇ ಸಾಲಿನ ಜುಲೈ ಅಂತ್ಯಕ್ಕೆ 2 ಲಕ್ಷ 97 ಸಾವಿರ ರೈತರಿಗೆ ರೂ.1611.74 ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
ವಿವಿಧ ವಸತಿ ಯೋಜನೆಯಡಿ ಸನ್ 2013-14 ನೇ ಸಾಲಿನಿಂದ ಇಲ್ಲಿಯವರೆಗೆ ಜಿಲ್ಲಾದ್ಯಂತ ಒಟ್ಟು 1.53 ಲಕ್ಷ ಫಲಾನುಭವಿಗಳಿಗೆ ಈಗಾಗಲೇ ಮನೆ ಮಂಜೂರು ಮಾಡಲಾಗಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸೇರಿ 19 ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು 365 ಕೋಟಿ 62 ಲಕ್ಷ 58 ಸಾವಿರ ರೂಗಳ ಅಂದಾಜಿನಲ್ಲಿ ವೆಚ್ಚದಲ್ಲಿ ಪ್ರಗತಿಯಲ್ಲಿವೆ.
ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಡಿ ಇದುವರೆಗೆ ಒಟ್ಟು 2,76,268 ಫಲಾನುಭವಿಗಳಿಗೆ 235.33 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಶೀಘ್ರದಲ್ಲೇ ಸರಕಾರದ ವತಿಯಿಂದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವುದು.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ,ಶ್ರೀ ರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ, ಶ್ರೀ ಅಡವಿಸಿದ್ದೇಶ್ವರ ಮತ್ತು ಶಂಕರಲಿAಗ ಹೀಗೆ ಒಟ್ಟು 11 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.
ಈ 11 ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ 6 ತಾಲೂಕುಗಳ 82562 ಹೆಕ್ಟೇರ್. , ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ 13,869 ಹೆಕ್ಟೇರ್ ಹಾಗೂ ಬಿಜಾಪೂರ ಜಿಲ್ಲೆಯ 44,375 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.
ಈ ಪೈಕಿ ತುಬಚಿ ಬಬಲೇಶ್ವರದ Phase-I ಹಾಗೂ Phase-II, ಚಚಡಿ-ಮುರಗೋಡ ಹಾಗೂ ಗೊಡಚಿನಮಲ್ಕಿ ಏತ ನೀರಾವರಿ ಯೋಜನೆಗಳ ಹೆಡವರ್ಕ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಏತ ನೀರಾವರಿ ಯೋಜನೆಗಳಿಗೆ ಈವರೆಗೆ ರೂ. 5,541 ಕೋಟಿ ವೆಚ್ಚವಾಗಿರುತ್ತದೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ವಿಶ್ವ ಬ್ಯಾಂಕಿನ ಧನ ಸಹಾಯದ ನೆರವಿನೊಂದಿಗೆ ಬೆಳಗಾವಿ ನಗರದಲ್ಲಿ 24×7 ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಅಮೃತ ಯೋಜನೆ ಅಡಿಯಲ್ಲಿ ಬೆಳಗಾವಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆ ರೂ. 157.56 ಕೋಟಿಗಳಿಗೆ ತಾಂತ್ರಿಕ ಅನುಮೋದನೆ ದೊರೆತಿರುತ್ತದೆ.
ಬೆಳಗಾವಿ ಮಹಾನಗರ ಪಾಲಿಕೆಯ ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ರೂ 125 ಕೋಟಿಗಳ ಅನುದಾನದಡಿಯಲ್ಲಿ ಒಟ್ಟು 90 ಕಾಮಗಾರಿಗಳು ಮಂಜೂರಾಗಿದ್ದು, ಇದರಲ್ಲಿ ಈಗಾಗಲೇ 38 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿದ್ದು, 52 ಕಾಮಗಾರಿಗಳು ಪ್ರಗತಿಹಂತದಲ್ಲಿರುತ್ತವೆ.
ಬೆಳಗಾವಿ ‘ಸ್ಮಾರ್ಟ್ ಸಿಟಿ’ ಯೋಜನೆ’ಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 50:50 ಅನುಪಾತದಲ್ಲಿ ಒಟ್ಟು ರೂ.1000 ಕೋಟಿ ಅನುದಾನ ಒದಗಿಸುತ್ತಿವೆ.
ಈ ವರೆಗೆ ಒಟ್ಟು ರೂ.854 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ರೂ. 804.91 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 102 ಕಾಮಗಾರಿಗಳಲ್ಲಿ 96 ಕಾಮಗಾರಿಗಳು ಪೂರ್ಣಗೊಂಡಿದ್ದು, 06 ಕಾಮಗಾರಿಗಳು ಪ್ರಗತಿಯಲ್ಲಿವೆ.
ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಜೂನ್-2024 ರ ಅಂತ್ಯದೊಳಗಾಗಿ ಮುಕ್ತಾಯಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.
ಕಳೆದ ಬಾರಿಯೂ ನಮ್ಮ ಸರಕಾರ ಇದ್ದಾಗ ಬೆಳಗಾವಿ ನಗರದಲ್ಲಿ ವೈದ್ಯಕೀಯ ಕಾಲೇಜು, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಲಾಗಿರುತ್ತದೆ. ಇದಲ್ಲದೇ ಖಾನಾಪುರ ರಸ್ತೆಯ ಅಗಲೀಕರಣ, ಬಾಕ್ಸೆöಟ್ ರಸ್ತೆ ಅಗಲೀಕರಣ ಹಾಗೂ ರಾಣಿ ಚೆನ್ನಮ್ಮ ಮೃಗಾಲಯ ಅಭಿವೃದ್ಧಿ ಮತ್ತಿತರ ಪ್ರಮುಖ ಕೆಲಸಗಳನ್ನು ಮಾಡಲಾಗಿರುತ್ತದೆ.
ಬೆಳಗಾವಿ ನಗರಕ್ಕೆ ಹೊಸ ಯೋಜನೆಗಳು-ಹೊಸ ತಾಲ್ಲೂಕು ಘೋಷಣೆ:
ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವುದರ ಜತೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ 350 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-48 (ಗಾಂಧಿ ನಗರ) ರಿಂದ ಆರ್.ಎಲ್.ಎಸ್. ಕಾಲೇಜ್‌ವರೆಗೆ ಮೇಲ್ಸೇತುವೆ ನಿರ್ಮಿಸಲಾಗುವುದು.
ಈ ಮೇಲ್ಸೇತುವೆ ಮೂಲಕ ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲು ಅವಕಾಶವಿರುತ್ತದೆ.
ಪ್ರಸ್ತುತ ಬೆಳಗಾವಿ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಇತರೆ ಕಛೇರಿಗಳ ಸ್ಥಳದಲ್ಲಿ ಒಟ್ಟು 52,800 ಚದುರ ಮೀಟರ್ (5,68,334 ಚದುರ ಫೂಟ್) ವಿಸ್ತೀರ್ಣ ಹೊಂದಿದ 2 ತಳಮಹಡಿ ಸೇರಿ ಒಟ್ಟು 6 ಮಹಡಿಗಳ ಹೊಸದಾಗಿ ಜಿಲ್ಲಾ ಕಛೇರಿಗಳ ಸಂಕೀರ್ಣವನ್ನು 300 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ನೂತನ ಕಟ್ಟಡ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಒಟ್ಟು 31 ಕಛೇರಿಗಳಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗುವುದು.
ನೂತನ ಕಟ್ಟಡ ಸಂಕೀರ್ಣ ನಿರ್ಮಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಪಾರ್ಕಿಂಗ್ ಸಮಸ್ಯೆಗೂ ಪರಿಹಾರ ದೊರಕಲಿದೆ. ನಗರಕ್ಕೆ ಹೊಂದಿಕೊಂಡಿರುವ ನೂತನ ರಿಂಗ್ ರಸ್ತೆಯ ಅಕ್ಕಪಕ್ಕದ ಜಮೀನನ್ನು ಕೈಗಾರಿಕೆ ಸ್ಥಾಪನೆಗೆ ಮೀಸಲಿಡಲಾಗುವುದು.
ಪ್ರಸ್ತುತವಿರುವ ಬೆಳಗಾವಿ ತಾಲ್ಲೂಕನ್ನು ವಿಭಜಿಸಿ ಇನ್ನೊಂದು ಹೊಸ ತಾಲ್ಲೂಕು ರಚನೆ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿಯೇ ಸರಕಾರದಿಂದ ಅಧಿಕೃತ ಘೋಷಣೆಯಾಗಲಿದೆ.
ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೆ ತರಲಾಗುವುದು.
***
ಆತ್ಮೀಯ ಬಂಧುಗಳೇ,
ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಪಣಕ್ಕಿಟ್ಟು ಹೋರಾಡಿದರು. ಸೆರೆಮನೆವಾಸ ಅನುಭವಿಸಿದರು. ಆಂಗ್ಲರ ಗುಂಡಿಗೆ ಬಲಿಯಾದರು. ನೇಣುಗಂಬವನ್ನು ಏರಿದರು. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.
ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರಗೊಂಡು ಈ 76 ವಸಂತ ಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ.
ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.
-ಜೈ ಹಿಂದ್, ಜೈ ಕರ್ನಾಟಕ ಮಾತೆ-
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ