Kannada NewsLatest

ಮತಾಂತರ ತಡೆಯಲು ಜೈನ ಸಮಾಜ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತಿಚಿನ ಕೆಲ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಈ ಮತಾಂತರ ಮಾಡುವ ಕೃತ್ಯಕ್ಕೆ ತಡೆಹಾಕಿ ಮತಾಂತರ ಮಾಡುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಇಂದು ಜೈನ ಯುವ ಸಂಘಟನೆಯ ನೇತೃತ್ವದಲ್ಲಿ ಬೆಳಗಾವಿ ಸಕಲ ಜೈನ ಸಮಾಜ ಸರಕಾರವನ್ನು ಆಗ್ರಹಿಸಿದೆ.

ಜೈನ ಧರ್ಮಿಯರು ಯಾವುತ್ತೂ ಯಾವುದೇ ಸಮಾಜಕ್ಕೆ ಕೇಡು ಬಯಸದೆ ಸಕಲ ಜೀವಾತ್ಮಗಳ ಏಳ್ಗೆಯನ್ನು ಬಯಸಿ ಭಗವಾನ ಮಹಾವೀರರ ಅಹಿಂಸಾ ತತ್ವಾಧರ್ಶನಗಳನ್ನು ಪಾಲಿಸಿ ಜೀವನ ನಡೆಸುತ್ತಿದ್ದಾರೆ. ಜೈನ ಸಮಾಜದ ಶ್ರೀಮಂತರು ಮಧ್ಯಮ ವರ್ಗದವರು ಮತ್ತು ಬಡವರು ಯಾವತ್ತೂ ಸಹ ಭಾರತ ರಾಷ್ಟ್ರದ ಏಳ್ಗೆಯಲ್ಲಿ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಂಡು ಬರುವುದಲ್ಲದೇ ಮುಂಬರುವ ಯುವ ಪಿಳಿಗೆಗೂ ಸಹ ಈ ಬಗ್ಗೆ ಬೋಧನೆ ಮಾಡುತ್ತ ಬಂದಿದೆ. ಆದರೆ ನಾವು ಅಹಿಂಸಾ ತತ್ವಗಳನ್ನು ಪಾಲಿಸಿಕೊಂಡು ಬರುತ್ತಿದ್ದರೆ, ಕೆಲ ಧಾರ್ಮಿಕ ಸಂಘಟನೆಗಳು ನಮ್ಮ ಜೈನ ಸಮಾಜದಲ್ಲಿನ ಬಡವರಿಗೆ ವಿವಿಧ ಆಮಿಷಗಳನ್ನು ತೋರಿಸಿ ಮತು ಅನೈತಿಕವಾಗಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರಗಳು ನಡೆಸುತ್ತಿವೆ.

ಇತ್ತಿಚಿಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿನ ಬಡ ಜೈನ ಧರ್ಮಿಯರ ಕುಟುಂಬಗಳಿಗೆ ವಿವಿಧ ಆಮಿಷ ತೋರಿಸಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಘಟನೆಯ ಬಗ್ಗೆ ಜೈನ ಯುವ ಸಂಘಟನೆಗೆ ಮಾಹಿತಿ ಬಂದಿತ್ತು. ಆಗ ಸಂಘಟನೆಯ ಪದಾಧಿಕಾರಿಗಳು ತಿಗಡೊಳ್ಳಿ ಗ್ರಾಮಕ್ಕೆ ತೆರಳಿ ಜೈನ ಧರ್ಮಿಯರನ್ನು ಮನವೊಲಿಸಿ ಮತಾಂತರವನ್ನು ತಡೆದಿದ್ದರು. ಆದರೆ ಮತಾಂತರ ಮಾಡುವ ಘಟನೆಗಳು ನಿರಂತರ ನಡೆಯುತ್ತಿರುವುದರಿಂದ ಇದನ್ನು ತಡೆಯುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಬೆಳಿಗ್ಗೆ ಸುಮಾರು 500 ಕ್ಕೂ ಹೆಚ್ಚು ಜೈನ ಸಮಾಜದ ಬಾಂಧವರು ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸೇರಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ಪ್ರಮುಖ ಪದಾಧಿಕಾರಿ ಕುಂತಿನಾಥ ಕಲಮನಿ ಅವರು ಮಾತನಾಡಿ, ಬೆಳಗಾವಿ ಕಿತ್ತೂರು, ಬೈಲಹೊಂಗಲ, ಖಾನಾಪೂರ ತಾಲೂಕುಗಳಲ್ಲಿ ಮತಾಂತರ ಮಾಡುವ ಕಾರ್ಯ ನಿರಂತರ ನಡೆಯುತ್ತಿದ್ದು, ಮತಾಂತರ ಕೃತ್ಯವನ್ನು ಎಸಗುತ್ತಿರುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಅದಲ್ಲದೇ ಕರ್ನಾಟಕ ಸರಕಾರ ಮತಾಂತರ ನಿಷೇಧ ಕಾನೂನು ತರಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸರಕಾರ ಕಠಿಣವಾದ ನಿಲುವು ತೆಗೆದುಕೊಂಡು ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನನ್ನು ಶೀಘ್ರವೇ ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದರು.

ಜೈನ ಯುವ ಸಂಘಟನೆಯ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ, ಕರ್ನಾಟಕ ಜೈನ ಅಸೋಶಿಯೇಶನ ಬೆಂಗಳೂರು, ದಕ್ಷಿಣ ಭಾರತ ಜೈನ ಸಭಾ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ, ಧಾರಿಣಿ ಮಹಿಳಾ ಮಂಡಳ, ಆರಾಧನಾ ಮಹಿಳಾ ಮಂಡಳ,ಭಾರತೀಯ ಜೈನ ಸಂಘಟನಾ, ಜೈನ ಯುವ ವೇದಿಕೆ, ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಸಮಿತಿ ಭರತೇಶ ಶಿಕ್ಷಣ ಸಂಸ್ಥೆ, ಗೋಟಮೇಶ ಶಿಕ್ಷಣ ಸಂಸ್ಥೆ, ಅಖಿಲ ಭಾರತೀಯ ಜೈನ ಅಲ್ಪಸಂಖ್ಯಾತರ ಒಕ್ಕೂಟ, ಜೈನ ವಕೀಲರ ಸಂಘ, ಬೆಳಗಾವಿ ನಗರ ಉಪನಗರಗಳಲ್ಲಿನ ಎಲ್ಲ ಜೈನ ಬಸದಿಯ ಟ್ರಸ್ಟಿ ಮತ್ತು ಪದಾಧಿಕಾರಿಗಳು, ಅನಗೋಳ, ಪೀರನವಾಡಿ, ಹಲಗಾ,ಬಸ್ತವಾಡ, ಅಲಾರವಾಡ, ಮಚ್ಛೆ, ಮಜಗಾಂವ, ಖಾನಾಪೂರ,ಕಿತ್ತೂರು, ಬೈಲಹೊಂಗಲ, ತಾಲೂಕಿನ ಜೈನ ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ರಸ್ತೆಯ ತುರ್ತು ರಿಪೇರಿಗೆ ಸಚಿವ ಸಿ.ಸಿ.ಪಾಟೀಲ್ ತಾಕೀತು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button