ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಒದಗಿಸುವ ಉದ್ಧೇಶದಿಂದ “ಎಲ್ಲರಿಗೂ ಉದ್ಯೋಗ” ಯೋಜನೆಯಡಿ ಡಿ.23 ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಉದ್ಯಮ್ ಬಾಗ್ ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗ ಮೇಳದ ಕುರಿತು ಮಾಹಿತಿಯನ್ನು ನೀಡಿದ ಉನ್ನತ ಶಿಕ್ಷಣ, ಮಾಹಿತಿ-ತಂತ್ರಜ್ಞಾನ, ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾದ ಡಾ.ಅಶ್ವತ್ಥನಾರಾಯಣ ಸಿ.ಎನ್. ಅವರು, “ಎಲ್ಲರಿಗೂ ಉದ್ಯೋಗ” ಎಂಬ ಯೋಜನೆಯಡಿ ಬೆಳಗಾವಿಂದ ಉದ್ಯೋಗ ಮೇಳ ಆರಂಭಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರ ಒತ್ತಾಸೆಯ ಮೇರೆಗೆ ಉದ್ಯಮಬಾಗ್ ದಲ್ಲಿ ಡಿ.23 ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಓಲಾ, ಎಚ್ಪಿ ಸೇರಿದಂತೆ 34 ಕಂಪನಿಗಳು ಈಗಾಗಲೇ ಮೇಳದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನೂ 70 ಕಂಪನಿಗಳು ಉತ್ಸುಕವಾಗಿವೆ. ಮೇಳವು ಸಂಪೂರ್ಣ ವಾಗಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ‘ಸ್ಕಿಲ್ ಕನೆಕ್ಟ್ ಪೋರ್ಟಲ್’ನಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು ಎಂದು ಅವರು ವಿವರಿಸಿದರು.
ನೋಂದಣಿ ಮಾಡಿಕೊಂಡ ನಂತರ ಉದ್ಯೋಗದ ಸ್ವರೂಪ, ಯಾವ ಕಂಪನಿಯು ಅಭ್ಯರ್ಥಿಯನ್ನು ಸಂದರ್ಶಿಸಲಿದೆ ಎನ್ನುವ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
23ರಂದು ನಡೆಯುವ ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾಗುವವರಿಗೆ ಮರುದಿನವಾದ ಡಿ.24 ರಂದು ಎರಡನೇ ಸುತ್ತಿನ ಸಂದರ್ಶನ ನಡೆಯಲಿದೆ ಎಂದು ಸಚಿವರು ಹೇಳಿದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಅವರ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಅವರು ತಿಳಿಸಿದರು.
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ- ಶಾಸಕ ಅಭಯ್ ಪಾಟೀಲ:
ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವರಾದ ಡಾ.ಅಶ್ವತ್ಥನಾರಾಯಣ ಸಿ.ಎನ್. ಅವರನ್ನು ಭೇಟಿ ಮಾಡಿ ಬೆಳಗಾವಿ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಡಿ.23 ರಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ “ಉದ್ಯೋಗ ಮೇಳ” ಹಮ್ಮಿಕೊಂಡಿದ್ದಾರೆ ಎಂದು ಶಾಸಕ ಅಭಯ್ ಪಾಟೀಲ್ ತಿಳಿಸಿದರು.
ಅಂದು ಉದ್ಯೋಗ ಮೇಳದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಎಲ್ಲರಿಗೂ ಉದ್ಯೋಗ ಒದಗಿಸುವ ಉದ್ದೇಶ ಹೊಂದಲಾಗಿದೆ.
ಈ ಭಾಗದಲ್ಲಿರುವ ಎಲ್ಲ ನಿರುದ್ಯೋಗಿ ಯುವಕ-ಯುವತಿಯರು ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಅಭಯ್ ಪಾಟೀಲ ಹೇಳಿದರು.
ಇದಕ್ಕೂ ಮುಂಚೆ ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜತೆ ಸಚಿವ ಡಾ.ಅಶ್ವತ್ಥನಾರಾಯಣ ಅವರು ಶುಕ್ರವಾರ ಇಲ್ಲಿನ ಸುವರ್ಣ ಸೌಧದಲ್ಲಿ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಸಚಿವ ಉಮೇಶ ಕತ್ತಿ, ಶಾಸಕರಾದ ಅಭಯ್ ಪಾಟೀಲ, ಪಿ.ರಾಜೀವ್, ಮಹೇಶ ಕುಮಟಹಳ್ಳಿ, ಮಹಾಂತೇಶ ದೊಡ್ಡಗೌಡ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ ಮುಂತಾದವರಿದ್ದರು.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ: ಆಯೋಗದ ವರದಿ ಸಲ್ಲಿಕೆಯ ನಂತರ ಕ್ರಮ: ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ