Kannada NewsLatest

ಮಠಗಳಿಂದಲೇ ಧರ್ಮ-ಸಂಸ್ಕೃತಿ ಉನ್ನತೀಕರಣಗೊಂಡಿವೆ: ಗುರುಬಸವಲಿಂಗ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕದಲ್ಲಿ ಮಠಗಳಿಂದಲೇ ಧರ್ಮ-ಸಂಸ್ಕೃತಿಗಳು ಉನ್ನತೀಕರಣಗೊಂಡು, ಮಾನವ ಸಮುದಾಯಕ್ಕೆ ಬೆಳಕು ನೀಡಿವೆ. ಮಠವೆಂದರೆ ಕೇವಲ ಭೌತಿಕ ಕಟ್ಟಡವಲ್ಲ; ಅದೊಂದು ಮಾನವತೆಯ ಮಹಾಮನೆ ಎಂದು ಕಡೋಲಿ ದುರದುಂಡೀಶ್ವರ ವಿರಕ್ತಮಠದ ಪೂಜ್ಯ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.

ಬೆಳಗಾವಿ ಕಾರಂಜಿಮಠದಲ್ಲಿ ದಿನಾಂಕ 3 ಜನವರಿ 2022 ರಂದು ಜರುಗಿದ 247 ನೇ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಶ್ರೀಗಳು ಮಾತನಾಡಿದರು. ಜಾಗತೀಕರಣದ ಈ ದಿನಮಾನದಲ್ಲಿ ಮನುಷ್ಯ ಭೌತಿಕ ಸಂಪತ್ತಿನ ಬೆನ್ನು ಹತ್ತಿ, ತನ್ನ ಅಸ್ತಿತ್ವ-ಅಸ್ಮಿತೆಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನಸಿಕ ಶಾಂತಿ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಕಳೆದು ಹೋದ ಈ ಮೌಲ್ಯಗಳು ಸಿಗುವುದು ಮಠಗಳಿಂದ ಮಾತ್ರ ಎಂದು ಅವರು ಹೇಳಿದರು.

ಶ್ರೀ ಪ್ರಕಾಶ ಗಿರಿಮಲ್ಲನವರ ಅವರು “ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಭವ್ಯ ಪರಂಪರೆ ಮತ್ತು ಸಾಮಾಜಿಕ ಕೊಡುಗೆ” ಈ ವಿಷಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಮತ್ತು ಡಾ. ಮಂಜುಳಾ ರಾಮಣ್ಣವರ ಅವರನ್ನು ಶ್ರೀಕಾರಂಜಿಮಠದ ವತಿಯಿಂದ ಸನ್ಮಾನಿಸಲಾಯಿತು. ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿಕೊಂಡಿದ್ದರು. ಪೂಜ್ಯ ಶ್ರೀ ಮಹಾಂತದೇವರು ಉಪಸ್ಥಿತರಿದ್ದರು.

ಕಾರಂಜಿಮಠದ ಮಾತೃಮಂಡಳಿ ತಾಯಂದಿರು ವಚನ ಪ್ರಾರ್ಥನೆ ಮಾಡಿದರು. ಪ್ರೊ. ಎ.ಕೆ.ಪಾಟೀಲ ನಿರೂಪಿಸಿದರು, ಶ್ರೀ ವಿ.ಕೆ.ಪಾಟೀಲ ವಂದನಾರ್ಪಣೆ ಸಲ್ಲಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೇನ್ಸ್ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button