ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಾಕ್ ಡೌನ್ ಆರಂಭವಾಗುವುದಕ್ಕೂ ಮುನ್ನವೇ ಶ್ರೀಮಂತ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ್ದ ಖತರ್ನಾಕ್ ಗ್ಯಾಂಗ್ ನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರದ ಬಾಂದೂರ್ ಗಲ್ಲಿಯ ನಿವಾಸಿ ಶ್ರೀಕಾಂತ್ ಚೌಗಲೆ ಅವರನ್ನು ಫೆಬ್ರವರಿ ಮೊದಲ ವಾರದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಗರದ ದೇಶಪಾಂಡೆ ಪೆಟ್ರೋಲ್ ಬಂಕ್ ಸಮೀಪದ ಹೋಟೆಲಿಗೆ ಉಪಹಾರ ತರಲು ಹೋಗಿದ್ದ ಶ್ರೀಕಾಂತ್ ಅವರನ್ನು ಕಾರಲ್ಲಿ ಬಂದ ನಾಲ್ವರು ಅಪಹರಿಸಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ಬೆಳವಟ್ಟಿ ಗ್ರಾಮದ ಚೇತನ ಪಾಟೀಲ ಎಂಬಾತನ ಫಾರ್ಮ್ ಹೌಸಿನಲ್ಲಿ 40 ದಿನ ಹಾಗೂ 30 ದಿನ ಸುರೇಶ್ ಪಾಟೀಲ ಎಂಬಾತನ ಮನೆಯಲ್ಲಿ ಬಂಧಿಸಿಡಲಾಗಿತ್ತು. ಈ ವೇಳೆ ಠೇವಣಿ ಹಣ ವಿತ್ ಡ್ರಾ ಮಾಡಿಕೊಡುವಂತೆ ಹಾಗೂ 3 ಎಕರೆ ಜಮೀನು ನಮ್ಮ ಹೆಸರಿಗೆ ಮಾಡಿಕೊಡುವಂತೆ ಪೀಡಿಸಿದ್ದಾರೆ. ಅಷ್ಟೇ ಅಲ್ಲದೆ ದೈಹಿಕವಾಗಿ ಹಲ್ಲೆ ಕೂಡ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಹೇಳಿದ್ದಾರೆ.
ಶ್ರೀಕಾಂತ್ ಚೌಗಲೆ ಹೆಸರಿನಲ್ಲಿ ಬೆಳಗಾವಿ ನಗರಕ್ಕೆ ಹೊಂದಿಕೊಂಡಂತೆ 2 ಎಕರೆ ಇಪ್ಪತ್ತು ಗುಂಟೆ ಜಾಗವಿದ್ದು, ಅದರ ಜೊತೆಗೆ ಅಕೌಂಟ್‍ನಲ್ಲಿ 35 ಲಕ್ಷ ಹಣವಿತ್ತು. ಇದೆಲ್ಲವನ್ನ ಲಪಟಾಯಿಸುವ ಉದ್ದೇಶದಿಂದ ಇವರನ್ನು ಕಿಡ್ನಾಪ್ ಮಾಡಲಾಗಿತ್ತು. ಆಸ್ತಿಯನ್ನ ತಮ್ಮ ಹೆಸರಿಗೆ ನೋಂದಾಯಿಸಿಕೊಡುವಂತೆ ಜೀವ ಬೇದರಿಕೆ ಹಾಕಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಿಜಿಸ್ಟರ್ ಕಚೇರಿ ಬಂದ್ ಆಗಿದ್ದರಿಂದ ಜಮೀನು ಕಬಳಿಸುವುದು ಸಾಧ್ಯವಾಗಲಿಲ್ಲ. ಅಕೌಂಟ್‍ನಲ್ಲಿದ್ದ 35 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿಕೊಳ್ಳಲು ಸ್ಕೇಚ್ ಹಾಕಿ ಶ್ರೀಕಾಂತ್ ಬಳಿಯಿಂದ ಚೆಕ್ ಬರೆಸಿಕೊಂಡಿದ್ದಾರೆ.
ಬ್ಯಾಂಕಿನಲ್ಲಿ ಚೆಕ್ ತಂದು ಹಣ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಬ್ಯಾಂಕ್ ಸಿಬ್ಬಂದಿ ಶ್ರೀಕಾಂತ್ ಅವರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಎರಡು ದಿನಗಳ ಹಿಂದೆ ಅವರನ್ನು ಬ್ಯಾಂಕಿಗೆ ಕರೆದುಕೊಂಡು ಬಂದಿದ್ದಾರೆ. ಆಗ ಹಣ ಡ್ರಾ ಮಾಡಿಕೊಳ್ಳುವಾಗ ಮಾರ್ಕೆಟ್ ಠಾಣೆ ಪೊಲೀಸರು ಮಪ್ತಿಯಲ್ಲಿ ಬಂದು ಕಿಡ್ನಾಪರ್ಸ್ ನ ಬಂಧಿಸಿ ಶ್ರೀಕಾಂತ್ ಅವರನ್ನು ಬಿಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ