ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಾಟ ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿ ಅದರಿಂದ ಹೊರಬಂದ ಬೆನ್ನಲ್ಲೇ ಈಗ ಬೆಳೆದ ಬೆಳೆಯ ಫಸಲು ಕೈಗೆ ಸಿಗದೇ ರೈತರು ಮತ್ತೆ ತೊಂದರೆಗೆ ಸಿಲುಕಿರುವ ಪರಿಸ್ಥಿತಿ ಎದುರಾಗಿದೆ.
ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ರೈತ ಅಜ್ಜಪ್ಪ ಅಳ್ನಾವರ ಒಂದುವರೆ ಲಕ್ಷ ರೂ ಖರ್ಚುಮಾಡಿ ಬೆಳೆದಿದ್ದ ಕ್ಯಾಬೇಜ್ ಗಡ್ಡೆ ಬಾರದೇ ಬರಿ ಎಲೆಗಳು ಮಾತ್ರ ಬಿಟ್ಟಿದ್ದು, ಅವುಗಳೂ ಒಣಗಿ ಹೋಗುತ್ತಿದ್ದು, ಕ್ಯಾಬೇಜ್ ಬೆಳೆಯ ಫಸಲು ಕೈಗೆ ಸಿಗದೇ ಕಂಗಾಲಾಗಿದ್ದಾರೆ.
ಈ ಬಗ್ಗೆ ಸಂಕಷ್ಟ ತೋಡಿಕೊಂಡಿರುವ ರೈತ ಅಜ್ಜಪ್ಪ, 45 ಸಾವಿರ ಖರ್ಚು ಮಾಡಿ ಹಿರೇಬಾಗೇವಾಡಿಯಲ್ಲಿ ನರ್ಸರಿಯೊಂದರಲ್ಲಿ ಕ್ಯಾಬೇಜ್ ಸಸಿ ತರಲಾಗಿತ್ತು. 2.15 ಎಕರೆ ಪ್ರದೇಶದಲ್ಲಿ ಹಾಕಿದ್ದೆವು. ಸಸಿ ನೆಡುವಾಗ ಮತ್ತು ನೆಲ ಬಿಟ್ಟು ಮೇಲೆದ್ದ ನಂತರ ಡಿಎಪಿ, ಪೊಟ್ಯಾಷ್, ಸಲ್ಫೇಟ್ ರಸಾಯನಿಕ ಗೊಬ್ಬರವನ್ನು ಎರಡು ಬಾರಿ ಹಾಕಲಾಗಿದೆ. 6 ಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಲಾಗಿದೆ. ಎಲ್ಲ ಸೇರಿ ಇಲ್ಲಿಯವರೆಗೆ ರೂ. 1.5 ಲಕ್ಷ ಖರ್ಚು ಮಾಡಲಾಗಿದೆ. ಸರಿಯಾಗಿ ಬೆಳೆ ಬಂದಿದ್ದರೆ 65 ದಿನಗಳಲ್ಲಿ ಕಟಾವ್ ಮಾಡಬೇಕಿತ್ತು. ಈಗ 80 ದಿನಗಳನ್ನು ಪೂರೈಸಿದೆ. ಆದರೂ ಕ್ಯಾಬೇಜ್ ಗಡ್ಡೆಗೆ ತಿರುಗಿಲ್ಲ.
ಕೊರೊನಾ ಲಾಕ್ ಡೌನ್ ವೇಳೆ ಬೆಳೆದ ಕಾಯಿಪಲ್ಲೆ ಮಾರಾಟ ಮಾಡಲು ಮಾರುಕಟ್ಟೆಯೇ ಸಿಗಲಿಲ್ಲ. ಈಗನೋಡಿದೆ ಹೀಗಾಗಿದೆ. ಸಸಿ ಕೊಟ್ಟ ಹಿರೇಬಾಗೇವಾಡಿಯ ನರ್ಸರಿಯವರನ್ನು ಕೇಳಿದರೆ, ಬೀಜ ಪೂರೈಸಿದ ಸೆಮಿನಸ್ ಕಂಪನಿ ಕಡೆಗೆ ಬೊಟ್ಟು ಮಾಡುತ್ತಾರೆ. ನಮಗೆ ಆದ ಬೆಳೆ ಹಾನಿ ತುಂಬಿಕೊಡಲು ನರ್ಸರಿಯವರು ಮುಂದಾಗಬೇಕು. ಬೀಜ, ಗೊಬ್ಬರ ಮಾಡಿದ ಖರ್ಚಾದರೂ ನೀಡಿದರೆ ಬದುಕಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ