ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್ ಅನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ”- ಎಂಬ ಘೋಷವಾಕ್ಯದ ಸಂಕಲ್ಪದೊಂದಿಗೆ ಈ ವರ್ಷ ನಾವು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತಿದ್ದೇವೆ. ಇದರ ಮೂಲ ಉದ್ದೇಶ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಶನ್ ಸೊಸೈಟಿ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಇತರ ಸರಕಾರಿ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಲ್.ಇ. ಸಂಸ್ಥೆಯ ಜೀರಿಗೆ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನ -2021 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಕ್ ಡ್ರೈವರ್ ನಂತಹ ಹಲವಾರು ಕೆಲಸದಲ್ಲಿ ತೊಡಗಿಕೊಂಡು ಮನೆಯಿಂದ ದೂರವಿರುವ ಕಾರಣದಿಂದ ಮತ್ತು ಈ ರೋಗವು ಹೆಚ್ಚಾಗಿ ರಕ್ತದಿಂದ ಅಥವಾ ಲೈಂಗಿಕ ಕ್ರಿಯೆಯಿಂದ ಹರಡುತ್ತಿದ್ದು, ಅಂತಹ ವ್ಯಕ್ತಿಗಳಿಗೆ ತರಬೇತಿಯನ್ನು ನೀಡುವ ಕೆಲಸ ಕೆಸ್ಯಾಪ್ಸ್ ಸೊಸೈಟಿಯು ಮಾಡುತ್ತಿದ್ದು, ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
2010 ರ ವೇಳೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ಚೈನ್ಯ, ಕೇರಳದಂತಹ ರಾಜ್ಯಗಳಲ್ಲಿ ಏಡ್ಸ್ ಪಿಡಿತರ ಸಂಖ್ಯೆಯು ಹೆಚ್ಚಾಗಿ ಕಂಡು ಬಂದಿತ್ತು. ಏಡ್ಸ್ ನಂತಹ ಸಾಂಕ್ರಾಮಿಕ ರೋಗವನ್ನು ವಿರೋಧಿಸಬೇಕೆ ವಿನಃ ಸಾಂಕ್ರಾಮಿಕ ರೋಗಿಗಳಿಗೆ ಅಲ್ಲ, ಅಂತಹ ರೋಗಿಗಳಿಗೆ ಮನೋಸ್ಥೈರ್ಯವನ್ನು ತುಂಬಬೇಕು. ನೈತಿಕ ಬೆಂಬಲ ಮತ್ತು ನೈತಿಕ ಸ್ಪೂರ್ತಿಯಿಂದ ಮಾತ್ರ ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ ಸುಧಾಕರ್ ಹೇಳಿದರು.
ಎ.ಆರ್ .ಟಿ ಚಿಕಿತ್ಸೆ ಪಡೆಯುವಂತೆ ಸೂಚನೆ :
ಎ.ಆರ್ ಟಿ ಚಿಕಿತ್ಸೆಗೆ ಮೂಲಕ ಸೊಂಕು ನಿಯಂತ್ರಿಸಬಹುದು. ಚಿಕಿತ್ಸೆಯ ಜೊತೆಗೆ ರೋಗಿಗೆ ಸಮಾಜದಿಂದ ನೈತಿಕ ಸ್ಫೂರ್ತಿ ಕೂಡ ಅತಿ ಮುಖ್ಯ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ಒಂದು ಲಕ್ಷ ಜನ ಏಡ್ಸ್ ಪೀಡಿತರಿದ್ದಾರೆ. ಅವರಲ್ಲಿ 70 ಪ್ರತಿಶತ ಜನರು ಎಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶೇ. 30ರಷ್ಟು ಜನರಲ್ಲಿ ಜಾಗೃತಿಯ ಕೊರತೆ ಇದೆ ಅದನ್ನು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಆಯುಷ್ಮಾನ್ ಭಾರತ ಆರೋಗ್ಯ ವಿಮೆ:
ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಜಗತ್ತಿನಲ್ಲಿ ಅತಿ ದೊಡ್ಡ ವಿಮೆ ಯೋಜನೆಯಾಗಿದೆ. ಪ್ರತಿ ಕುಟುಂಬವು 5 ಲಕ್ಷದವರೆಗೂ ಉಚಿತ ಚಿಕಿತ್ಸೆ ತೆಗೆದುಕೊಳ್ಳಬಹುದು. ಯಾವುದೇ ಒಂದು ಮಾಸಿಕ ವೆಚ್ಚ(ಪ್ರಿಮಿಯಂ) ಭರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಈ ಯೋಜನೆಯನ್ನು ಪ್ರತಿಯೊಬ್ಬರಿಗೆ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ.
ಗಡಿ ಜಿಲ್ಲೆ ಬೆಳಗಾವಿಗೆ ವಿಶೇಷ ಒತ್ತು:
ನೆರೆಯ ರಾಜ್ಯದ ಜನರು ಆಗಮಿಸುವುದರಿಂದ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿರುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ಬೆಳಗಾವಿ ಜಿಲ್ಲೆಯಲ್ಲಿ ಎಚ್.ಐ.ವಿ.-ಏಡ್ಸ್ ನಿಯಂತ್ರಣಕ್ಕಾಗಿ ಹಾಗೂ ಜಾಗೃತಿಮೂಡಿಸಲು 4-5 ರಂದು ಸರಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸದರಿ ಸಂಸ್ಥೆಗಳಿಗೆ ಯಾವುದೇ ರೀತಿಯ ಸೌಲಭ್ಯಗಳು ಇದುವರೆಗೂ ದೊರೆಯುತ್ತಿಲ್ಲ. ಈ ರೀತಿಯ ಕೇಂದ್ರಗಳು ನಡೆಸಲು ಯಾವುದೇ ಸ್ವಂತಃ ಸ್ಥಳ ಇಲ್ಲವಾಗಿದೆ. ಆದ್ದರಿಂದ ಎನ್.ಜಿ.ಓ. ಗಳಿಗೆ ಅನುದಾನ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಬೀಮ್ಸನಲ್ಲಿ ಪ್ರತಿ ವರ್ಷ 100 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಮಾಡಿ ಕೊಡುತ್ತಿದ್ದು, ಸಿಬ್ಬಂದಿಯ ಕೊರತೆಯ ಹಾಗೂ ಇನ್ನಿತರ ಕಾರಣಗಳಿಂದ ಅದನ್ನು 60 ಸೀಟುಗಳಿಗೆ ಇಳಿಸಲು ಪ್ರಸ್ತಾಪ ಮಾಡಲಾಗಿದೆ ಇರುವ ಕೊರತೆಗಳನ್ನು ನಿಗಿಸಿ 100 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವ ಡಾ.ಕೆ. ಸುಧಾಕರ್ ಅವರಿಗೆ ಮನವಿ ಮಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯಕೀಯ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಇದೇ ಸಂದಭರ್ದಲ್ಲಿ ಏಡ್ಸ್ ಜಾಗೃತಿಯ ಮೂಡಿಸಲು ಹಾಗೂ ಆಯುಷ್ಮಾನ್ ಯೋಜನೆಯ ಪ್ರಚಾರಸಾಮಗ್ರಿ ಹಾಗೂ ಭಿತ್ತಿತ್ರಗಳನ್ನು ಸಚಿವ ಡಾ.ಕೆ.ಸುಧಾಕರ್ ಬಿಡುಗಡೆ ಮಾಡಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಡಾ. ಕೆ.ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ್ ಎಚ್ ವಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೆಶಕರಾದ ಡಾ. ಅಪ್ಪಾಸಾಹೇಬ ನರಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿಗಳಾದ ಡಾ.ಎಸ್.ವಿ ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಬೆಳೆಹಾನಿ ಪರಿಹಾರ ಧನ ಹೆಚ್ಚಳ; ಖಾಸಗಿ ಶಾಲೆಗಳ ಸರ್ಕಾರಿ ವೇತನಾನುದಾನಕ್ಕೂ ಕ್ರಮ; ಸಿಎಂ ಬೊಮ್ಮಾಯಿ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ