ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿರಸಂಗಿ ಲಿಂಗರಾಜರು ತ್ಯಾಗದ ಪಥದಲ್ಲಿ ನಡೆದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಬೆಳಕಾದವರು ಎಂದು ಹಾರೂಗೇರಿಯ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಎಸ್.ಮಾಳಿ ನುಡಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಲಿಂಗರಾಜ ಜಯಂತಿ ಉತ್ಸವ ಸಮಿತಿಯಿಂದ ಆಯೋಜಿಸದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸಿರಸಂಗಿ ಸಂಸ್ಥಾನ ಇಂದಿಲ್ಲ ಆದರೆ ಲಿಂಗರಾಜರು ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ. ಲಿಂಗರಾಜರಜಯಂತಿ ವ್ಯಕ್ತಿ ಜಯಂತಿಯಲ್ಲ ಅದು ತ್ಯಾಗದ ಜಯಂತಿ ಎಂದು ಅವರು ಹೇಳಿದರು. ಲಿಂಗರಾಜರು ತಮ್ಮ ಬದುಕಿನಲ್ಲಿ ಎಷ್ಟೇ ತೊಂದರೆಗಳು ಎದುರಾದರೂ ಪ್ರವಾಹದೊಂದಿಗೆ ಈಜಾಡಿ ಸಮಾಜ ಮೌಲ್ಯಗಳನ್ನು ಎತ್ತಿಹಿಡಿದರು. ಸ್ತ್ರೀ ಶಿಕ್ಷಣದ ಹರಿಕಾರರಾಗಿ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿದ ಮಹಾಪುರುಷರು ಸಿರಸಂಗಿ ಲಿಂಗರಾಜರು. ಒಂದು ಕಾಲದಲ್ಲಿ ಶಿಕ್ಷಣ ಉಳ್ಳವರ ಪಾಲಿತ್ತು, ಸಮಾಜದ ಬಡವನು ಶಿಕ್ಷಣ ಪಡೆದು ಉನ್ನತ ಜೀವನವನ್ನು ಪಡೆಯಬೇಕೆಂಬ ಸಂಕಲ್ಪ ಲಿಂಗರಾಜರದಾಗಿತ್ತು. ಅಂತೆಯೇ ಇಚ್ಛಾಪತ್ರವನ್ನು ದಾನಪತ್ರವನ್ನಾಗಿ ಮಾಡಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದರು.
ಲಿಂಗರಾಜ ಏಜ್ಯುಕೇಶನ್ ಟ್ರಸ್ಟ್ ಭಾರತದ ಸಂಸ್ಥಾನಿಕರಲ್ಲಿಯೇ ಪ್ರಥಮ ಶಿಕ್ಷಣ ಟ್ರಸ್ಟ್ ಎನಿಸಿಕೊಂಡಿತು. ಹೀಗೆ ಲಿಂಗರಾಜರುತಮ್ಮ ಬದುಕಿನಲ್ಲಿ ಯಾವುದನ್ನೂ ಸ್ವಹಿತಕ್ಕಾಗಿ ಆಶಿಸದೆ ಸಮಾಜದ ಏಳ್ಗೆಗಾಗಿ ದುಡಿದರು. ಅವರು ದಾನ ಅಮರವಾಗಿ ಇಂದಿಗೂ ಉಳಿದಿದೆ. ಅವರ ಟ್ರಸ್ಟಿನಿಂದ ಶಿಕ್ಷಣವನ್ನು ಪೂರೈಸಿದ ಹಲವಾರು ಮಹನೀಯರು ಸಮಾಜದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿದನ್ನು ಸ್ಮರಿಸಬಹುದೆಂದು ಹೇಳಿದರು.
ಸಿರಸಂಗಿ ಲಿಂಗರಾಜರ ಬದುಕಿನ ಕುರಿತು ಶ್ರೀ ಯರು ಪಾಟೀಲರು ರಚಿಸಿದ ಕಾದಂಬರಿ ‘ತ್ಯಾಗಶ್ರೀ’ ಯನ್ನು ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿಯವರು ಲೋಕಾರ್ಪಣೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿಯವರು ಮಾತನಾಡಿ ‘ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ದಾರಿದ್ರ್ಯವನ್ನುತೊಡೆದು ಹಾಕಬೇಕೆಂಬ ಸಂಕಲ್ಪದೊಂದಿಗೆ ಶೈಕ್ಷಣಿಕ ರಂಗಕ್ಕೆ ಆರ್ಥಿಕ ಮತ್ತು ಬೌದ್ಧಿಕ ಕಸುವನ್ನು ತುಂಬಿದರು. ವ್ಯಕ್ತಿಯೊಬ್ಬನಿಗೆ ಕೊಡುವ ದಾನಕ್ಕಿಂತಲೂ ಶಿಕ್ಷಣ ಸಂಘ ಸಂಸ್ಥೆಗಳಿಗೆ ಕೊಡುವ ದಾನ ಚಿರಂತನ ಹಾಗೂ ಭವಿಷ್ಯತ್ತಿಗೆ ಭದ್ರ ನೆಲೆ ರೂಪಿಸುವುದೆಂಬ ಅವರ ಪೂರ್ವ ನಿರ್ಧಾರಿತ ಚಿಂತನೆ ನವಸಮಾಜಕ್ಕೆ ಪ್ರೇರಕವಾಯಿತು. ಬೇಸಾಯವನ್ನು ನಚ್ಚಿಕೊಂಡ, ವ್ಯಾಪಾರದಲ್ಲಿ ದಿನದೂಡಿ ಶಿಕ್ಷಣದದಿಂದ ದೂರಸರಿದ ಸಮಾಜದ ವರ್ಗದವರಿಗೆ ಶೈಕ್ಷಣಿಕ ಜಾಗೃತಿ ಮೂಡಿಸಿದ ಲಿಂಗರಾಜರ ಸಾಧನೆ ಅದ್ವಿತೀಯವಾದುದ. ಏನೆಲ್ಲವೂ ಇದ್ದರೂ ಯಾವುದಕ್ಕೂ ಅಂಟಿಕೊಳ್ಳದೆ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದ ಲಿಂಗರಾಜರು ಸಮಾಜದಲ್ಲಿ ತಮ್ಮ ಪ್ರಭಾವ ಬೀರಲಿಲ್ಲ. ಅದೇ ಅವರನ್ನು ಚಿರಚಿಂತನ ಖ್ಯಾತಿಯೆಡೆಗೆ ಕೊಂಡೊಯ್ಯಿತು, ಅವರ ಅಭಿವೃದ್ಧಿಯ ಸಂಕಲ್ಪಗಳು ಜನಾನುರಾಗಿಯನ್ನಾಗಿಸಿದವು. ತನಗಿಂತಲೂ ಸಮಾಜ ದೊಡ್ಡದೆಂಬ ಅರಿವಿನ ಮಾರ್ಗಕ್ಕೆ ಬೆಲೆಕೊಟ್ಟ ಲಿಂಗರಾಜರ ಬದುಕುತೆರೆದ ಪುಸ್ತಕವಾಗಿದೆ.
ನಾಡು ದೇಶದುದ್ದಗಲಕ್ಕೂ ಅವರ ಕೀರ್ತಿ ಕುಡಿಚಾಚಿ ನಿಂತಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಲಿಂಗರಾಜರ ತ್ಯಾಗ ನಿಸ್ವಾರ್ಥ ಸೇವೆಗಳನ್ನು ನಾಡು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಅಂತೆಯೇ ಅವರ ತ್ಯಾಗದಿಂದ ಪ್ರೇರೇಪಿತರಾದ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳು ತಾವು ಸ್ಥಾಪಿಸಿದ ಕಾಲೇಜಿಗೆ ಲಿಂಗರಾಜರ ಹೆಸರಿಟ್ಟು ಗೌರವಿಸಿದ್ದಾರೆ. ಹೀಗೆ ತ್ಯಾಗ ಜೀವಿಯಾಗಿದ್ದ ಲಿಂಗರಾಜರನ್ನು ಸ್ಮರಿಸುವ ಕಾರ್ಯಜರುಗಬೇಕೆಂದು ತಿಳಿಸಿದರು.
ಬಸಮ್ಮ ಮಠದ ಪ್ರಾರ್ಥನೆ ನುಡಿಸಿದರು, ಲಿಂಗರಾಜ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ತಟವಟಿಯವರು ಸ್ವಾಗತಿಸಿದರು. ಡಾ.ಎಚ್.ಎಮ್.ಚನ್ನಪ್ಪಗೋಳ ವಂದಿಸಿದರು.
ಇದೇ ಸಂದರ್ಭದಲ್ಲಿ ಕೆ ಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಲಿಂಗರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕೆ.ಎಲ್.ಇ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಸುನೀಲಜಲಾಲಪುರೆ, ಆಜೀವ ಸದಸ್ಯ ಡಾ.ಶಿವಯೋಗಿ ಹೂಗಾರ, ಪ್ರೊಶೀತಲ ನಂಜಪ್ಪನವರ, ಪ್ರೊ ಮಹಾದೇವಬಳಿಗಾರ ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಮ್.ತೇಜಸ್ವಿ, ಆರ್‌ಎಲ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜ್ಯೋತಿ ಕವಳೇಕರ, ಸಾಹಿತಿ ಸಿದ್ದಣ್ಣಾ ಉತ್ನಾಳ ಇತರ ಗಣ್ಯರು ಉಪಸ್ಥಿತರಿದ್ದರು. ಡಾ.ಮಹೇಶ ಸಿ.ಗುರನಗೌಡರ ಹಾಗೂ ಪ್ರೊ.ಸಿದ್ದನಗೌಡಾ ಪಾಟೀಲ ನಿರೂಪಿಸಿದರು.
ವಿಧಾನ ಪರಿಷತ್ ಸದಸ್ಯರ ಮೇಲಿನ ಕಳಂಕ ನಿವಾರಣೆಯಾಗುವ ರೀತಿ ಕೆಲಸ – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ