ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಷಡ್ಯಂತ್ರ ರಾಜಕಾರಣದಲ್ಲಿ ಸ್ವಾಭಾವಿಕ. ಆದರೆ ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಲಾಗದು, ಮಾಡಿದರೂ ನಾನು ಎರಡು ಹೆಜ್ಜೆ ಮುಂದಿರುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಯಮಕನಮರಡಿಯಲ್ಲಿ ಜನಾಭಿಪ್ರಾಯ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಷಡ್ಯಂತ್ರ, ಒಬ್ಬರ ಮೇಲೆ ಸಂಶಯಪಡುವಂತಹ ವಾತಾವರಣ ಇಲ್ಲ. ಹಾಗಾಗಿ ನನ್ನ ವಿರುದ್ಧ ಷಡ್ಯಂತ್ರ ಸಾಧ್ಯವಿಲ್ಲ ಎಂದರು.
ಇನ್ನು ಲೋಕಸಭಾ ಉಪಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಟಿಕೆಟ್ ಗಾಗಿ ಎಲ್ಲರೂ ಪೈಪೋಟಿ ನಡೆಸುತ್ತಾರೆ. ಆದರೆ ನನ್ನ ವಿಚಾರದಲ್ಲಿ ನೀವೇ ಸ್ಪರ್ಧಿಸಬೇಕು ಎಂದು ಪಕ್ಷ ಎಲ್ಲರೂ ಒಗ್ಗಟ್ಟಾಗಿ ಹೇಳಿರುವುದು ಸಂತಸದ ವಿಚಾರ. ಶಾಸಕನಾದವನು ಸಂಸದನಾದರೆ ಬಡ್ತಿ ಸಿಕ್ಕಂತೆ. ರಾಷ್ಟ್ರ ರಾಜಕಾರಣಕ್ಕೆ ಹೋಗಲುಬಡ್ತಿ ಸಿಗಲು ನಿಮ್ಮ ಜನರ ಆಶೀರ್ವಾದವೇ ಕಾರಣ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದರು.
ರಾಜ್ಯದಲ್ಲಿ ನಾನು ಹೆಸರು ಮಾಡಲು ಯಮಕನಮರಡಿ ಕ್ಷೇತ್ರ ಕಾರಣ. ಈ ಎಲ್ಲಾ ಶ್ರೇಯಸ್ಸು ಈ ಕ್ಷೇತ್ರದ ಜನರಿಗೆ ಸಲ್ಲಬೇಕು ಎಂದು ಹೇಳಿದರು. ಯಮಕನಮರಡಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು 13 ವರ್ಷಗಳಲ್ಲಿ ನಾನು ಬಹಳ ಕೆಲಸ ಮಾಡಿದ್ದೇನೆ. ಇನ್ನು ಮಾಡಬೇಕಿದೆ. ಪಕ್ಷದ ಆದೇಶ ಪಾಲಿಸಬೇಕಿರುವುದು ನಮ್ಮ ಕರ್ತವ್ಯ. ಪಕ್ಷದ ನಿರ್ಧಾರವೇ ಅಂತಿಮ ಹೀಗಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ