Kannada NewsLatest

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರ ನಡೆ ಹಳ್ಳಿಯ ಕಡೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶನಿವಾರ(ಫೆ‌.19) ನಿಪ್ಪಾಣಿ ತಾಲ್ಲೂಕಿನ ಹಂಚಿನಾಳ ಕೆ.ಎಸ್. ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು

ಹಂಚಿನಾಳ ಕೆ. ಎಸ್. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಗ್ರಾಮದ ಹಿರಿಯರು, ಪೂರ್ಣಕುಂಭ ಹೊತ್ತ ಮಹಿಳೆಯರು ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮದ ಬ್ರಹ್ಮನಾಥ ಮಂದಿರಕ್ಕೆ ಮೊದಲು ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಶಿವಾಜಿ ಜಯಂತಿ ಪ್ರಯುಕ್ತ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಗ್ರಾಮಸಂಚಾರ ಆರಂಭಿಸಿದರು.
ಎಸ್.ಸಿ. ಕಾಲನಿಯ ಮನೆ ಮನೆಗೆ ಭೇಟಿ ನೀಡಿದ ಅವರು, ಜನರ ಅಹವಾಲುಗಳನ್ನು ಆಲಿಸಿದರು.

ಕನ್ನಡದಲ್ಲೂ ಓದು- ಬರಹ ಕಲಿಯಲು ಸಲಹೆ:

ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸೃಷ್ಟಿ, ತಮ್ಮ ಶಾಲೆಯ ರಸ್ತೆ ಅಭಿವೃದ್ಧಿ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಳು.
ಗರ್ಲ್ಸ್ ಸ್ಕೂಲ್ ರಸ್ತೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿಗಳು, “ಮಹಿಳೆಯರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಇದಲ್ಲದೇ ಮೀಸಲಾತಿ ಕೂಡ ದೊರೆಯುವುದರಿಂದ ಕನ್ನಡವನ್ನೂ ಕಲಿಯಬೇಕ” ಎಂದು ಸಲಹೆ ನೀಡಿದರು.

ಮನೆಬಾಗಿಲಿಗೆ ಬಂದ ಡಿಸಿಗೆ ಮಹಿಳೆಯರಿಂದ ಆರತಿ:

ಹರಿಜನ ಕೇರಿ, ವಡ್ಡರ ಓಣಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸ್ವತಃ ಕೈಯಲ್ಲಿ ಪೆನ್ನು ಮತ್ತು ನೋಟಬುಕ್ ಹಿಡಿದು ಮನೆಬಾಗಲಿಗೆ ಬಂದಾಗ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು.
ರಸ್ತೆ, ನೀರು ಮತ್ತಿತರ ಸೌಲಭ್ಯ ಒದಗಿಸುವಂತೆ ಕೆಲವರು ಕೇಳಿಕೊಂಡರು. ಮನೆಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ವಸತಿ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರು.

ಅಂಗನವಾಡಿ ಮಕ್ಕಳ ಹಾಡಿಗೆ ಚಪ್ಪಾಳೆ…

ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ಚಾಕೋಲೇಟ್ ವಿತರಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಜತೆ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳು ತಾವು ಕಲಿತ ಹಾಡನ್ನು ಹಾಡಿದಾಗ ಜಿಲ್ಲಾಧಿಕಾರಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಅಂಗನವಾಡಿ ಆವರಣದಲ್ಲಿ ನಿರ್ಮಿಸಲಾಗಿರುವ ಕಿಚನ್ ಗಾರ್ಡನ್ ಅನ್ನು ಜಿಲ್ಲಾಧಿಕಾರಿ ಹಿರೇಮಠ ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದಲ್ಲಿ ಒದಗಿಸಲಾಗುವ ಸೌಲಭ್ಯಗಳನ್ನು ವಿವರಿಸಿದರು.

ಇದಾದ ಬಳಿಕ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಸಾಥ್ ನೀಡಿದರು.

ಇಲ್ಲೂ ಕೂಡ ಮಕ್ಕಳಿಗೆ ಕನ್ನಡ ಕಲಿಯುವಂತೆ ತಿಳಿಸಿದ ಅವರು, ಮಹಿಳೆಯರಿಗೆ ಮೀಸಲಾತಿ, ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೌಷ್ಟಿಕಾಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ಶಾಲೆಯ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೂಡ ಜನರ ಅಹವಾಲುಗಳನ್ನು ಆಲಿಸಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೋಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ತಹಶಿಲ್ದಾರ ಮೋಹನ ಭಸ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಗೋವಿಂದ ಕಾರಜೋಳ ಕಾರಿಗೆ ಘೇರಾವ್ ಹಾಕಿ ರೈತರು, ಕಾರ್ಮಿಕರ ಆಕ್ರೋಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button