ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, 5 ಸೇತುವೆಗಳು ಜಲಾವೃತಗೊಂಡಿವೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಘಟಪ್ರಭಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹಿಡಕಲ್ ಜಲಾಶಯದಲ್ಲಿ ಒಳಹರಿವು ಹೆಚ್ಚಿದ್ದು, 20,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಪರಿಣಾಮ ಸುತ್ತಮುತ್ತಲ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿಯುಂತಾಗಿದ್ದು, ಹಲವು ಹಳ್ಳಿಗಳು, ರಸ್ತೆ, ಸೇತುವೆಗಳು ನೀರಿನಲ್ಲಿ ಮುಳುಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಜತ್ರಾತ್ ಭೀವಶಿ ಸೇತುವೆ ಮೇಲೆ ಒಂದು ಅಡಿ ನೀರು ಹರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲಿಸ್ ಸಿಬ್ಬಂದಿಗಳು ಸೇತುವೆಗೆ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಜನರು ಸಂಚರಿಸದಂತೆ ನಿರ್ಬಂಧಿಸಿದ್ದಾರೆ.
ಅಕ್ಕೋಲ-ಸಿದ್ನಾಳ ಸೇತುವೆ, ಕುನ್ನೂರು-ಬೋಜವಾಡ, ಕುನ್ನೂರು ಬೋರವಾಡ, ಹುಕ್ಕೇರಿ-ಯರನಾಳ ಸೇರಿದಂತೆ ಒಟ್ಟು 5 ಸೇತುವೆಗಳು ಮುಳುಗಡೆಯಾಗಿದ್ದು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಬೆಳಗಾವಿ ಜಿಲ್ಲೆಯ ಹಲವೆಡೆಗಳಲ್ಲಿ ಭಾರಿ ಮಳೆಯಿಂದ ಈಗಾಗಲೇ ಹಲವೆಡೆ ಮನೆ ಗೋಡೆ, ಶಾಲೆ ಗೋಡೆಗಳು ಕುಸಿದು ಬಿದ್ದಿದ್ದು, ಇಂದು ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ ನಾಲ್ಕುದಿನ ಭಾರಿ ಮಳೆ ಮುನ್ಸೂಚನೆ ನೀಡಿರುವುದು ಪ್ರವಾಹ ಭೀತಿ ಎದುರಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಕುರಾಣಿ ಕೊಚಾರಿ ಸೇತುವೆ, ಸಿಂಗಲಾಪುರ ಸೇತುವೆ ಕೂಡ ಘಟಪ್ರಭಾ ಪ್ರವಾಹಕ್ಕೆ ಮುಳುಗಡೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ವರುಣಾರ್ಭಟ; ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ