ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬದುಕು ಹಿಂದೆಂದಿಗಿಂತಲೂ ಕರಾಳ ಮತ್ತು ಶೋಚನೀಯ ಎಂಬುದನ್ನು ತೋರಿಸಿಕೊಡುವ ಮೂಲಕ ಕೊರೊನಾ ಬಾಂಧವ್ಯಗಳ ನಡುವಿನ ಪರದೆ ಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಖ್ಯಾತ ಸಾಹಿತಿ, ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ್ ಅಭಿಪ್ರಾಯಪಟ್ಟರು.
ನಿಪ್ಪಾಣಿಯಲ್ಲಿ ಸೋಮವಾರ ಮಹಿಳಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಸ್ತ್‌ಮಸ್ತಿ ತಂಡದಿಂದ ನಡೆದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ ಒಂದು ವರ್ಷಗಳಿಂದಲೂ ಮನುಷ್ಯರನ್ನು ಹಗ್ಗವಿಲ್ಲದೆಯೇ ತಮ್ಮ ತಮ್ಮ ಮನೆಯಲ್ಲಿಯೇ ಕಟ್ಟಿಹಾಕುವ ಕೆಲಸವನ್ನು ಕೊರೊನಾ ಮಾಡಿದೆ. ಈ ಸಮಯದ ಸದುಪಯೋಗ ಮಾಡಿಕೊಳ್ಳುವ ಮೂಲಕ ಆಶಾವಾದಿಯಾಗಿ ಪಾಸಿಟೀವ್ ಬದುಕು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಸಾಹಿತಿ ದೀಪಿಕಾ ಚಾಟೆ ಮಾತನಾಡಿ, ಕೊರೊನಾ ಸಮಯದಲ್ಲಿ ತಾವು ಬೆಳಗಾವಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿನ ಆಸಕ್ತ ಲೇಖಕಿಯರನ್ನು ಒಗ್ಗೂಡಿಸಿ ಅವರಿಂದ ದಿನಕ್ಕೊಂದು ವಿಷಯದ ಮೇಲೆ ಕಥೆ, ಕವನಗಳನ್ನು ಬರೆಸಿ ಕೃತಿಗಳನ್ನು ಕೂಡಿಸಿಟ್ಟಿರುವ ಬಗ್ಗೆ ಹೇಳಿ ಶೀಘ್ರವೇ ಈ ಎಲ್ಲಾ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಹೊರತರುವ ಯೋಜನೆ ರೂಪಿಸಲಾಗಿದೆ ಎಂದರು.
ಇನ್ನು ಬೆಳಗಾವಿಯ ಮಾಜಿ ಉಪ ಮೇಯರ್, ಸಮಾಜಸೇವಕಿ ಜ್ಯೋತಿ ಭಾವಿಕಟ್ಟಿ ಅವರು, ಕೊರೊನಾ ಕಾಲದಲ್ಲಿ ತಮಗಾದ ಅನುಭವಗಳನ್ನು ಸ್ವಾರಸ್ಯಕರವಾಗಿ ಹೇಳುವ ಮೂಲಕ ಕೇಳುಗರ ಮುಖದಲ್ಲಿ ನಗು ಅರಳಿಸಿದರು. ತಾನು ಸ್ವತಃ ಕೊರೊನಾ ಪೀಡಿತಳಾಗಿ ಅನುಭವಿಸಿದ ಯಾತನೆಯನ್ನು ಮನಮುಟ್ಟುವಂತೆ ಲೇಖಕಿ ಶಕುಂತಲಾ ಬಾಳೇಕುಂದ್ರಿಯವರು ಕೇಳುಗರ ಮುಂದಿಟ್ಟರು. ಪತ್ರಕರ್ತೆ ಕೀರ್ತಿಶೇಖರ್ ಕೊರೊನಾ ಕಾಲದಲ್ಲಿ ತಾವು ಕಂಡ ಕೆಲ ಘಟನೆಗಳ ಬಗ್ಗೆ ತಿಳಿಸಿ, ಈ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ತೋರಿದ ಅಕ್ಕರೆ, ಕಾಳಜಿ ಮತ್ತು ಸೇವಾ ಮನೋಭಾವವನ್ನು ಹೊಗಳಿದರು. ಚರ್ಚಾಗೋಷ್ಠಿಯನ್ನು ಪತ್ರಕರ್ತೆ ಸುನೀತಾ ದೇಸಾಯಿ ನಿರ್ವಹಿಸಿ, ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾಭಜಂತ್ರಿ, ನಿಪ್ಪಾಣಿ ಸಿಪಿಐ ಗುರುನಾಥ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ