*ಮೇಕೆದಾಟು ಪಾದಯಾತ್ರೆ; ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಹಳ ವರ್ಷಗಳಿಂದ ಮೇಕೆದಾಟು ಯೋಜನೆ ಪ್ರಾರಂಭಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದರು. ನಾನು ನೀರಾವರಿ ಸಚಿವನಾಗಿದ್ದಾಗ ಅದಕ್ಕೆ ಅನುಮತಿ ನೀಡಿದ್ದೆ. ಇದು ಸಮತೋಲಿತ ನೀರಾವರಿ ಯೋಜನೆ. ಇದರಿಂದ ರೈತರು ಹಾಗೂ ಬೆಂಗಳೂರು ಜನರ ಕುಡಿಯುವ ನೀರಿಗೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆಗೂ ನೆರವಾಗುತ್ತದೆ. ನಮ್ಮ ನೀರು, ನಮ್ಮ ಭೂಮಿ, ನಮ್ಮ ಹಣದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದು ನಮ್ಮ ಯೋಜನೆಯಾದರೂ ಲಾಭ ಮಾತ್ರ ಉಭಯ ರಾಜ್ಯಗಳಿಗೂ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಯೋಜನೆಗೆ ನಮ್ಮ ಹೋರಾಟ ಆರಂಭವಾಗಿದೆ. 2022 ರ ಜನವರಿ 9 ಭಾನುವಾರದಿಂದ ಜ. 19 ರವರೆಗೂ ಈ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜ. 9 ರಂದು ಬೆಳಗ್ಗೆ 9.30 ಕ್ಕೆ ಮೇಕೆದಾಟಿನಿಂದ ಪಾದಯಾತ್ರೆ ಆರಂಭವಾಗಲಿದೆ. ಅಲ್ಲಿಂದ ಸುಮಾರು 75 ಕಿ.ಮೀ ದೂರದ ಕೆಂಗೇರಿಯ ನಗರ ಪ್ರದೇಶಕ್ಕೆ ಬರುವುದಕ್ಕೆ ಐದು ದಿನಗಳ ಕಾಲಾವಕಾಶ ಬೇಕು. ಹೀಗಾಗಿ ಐದು ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಐದು ದಿನ ನಗರ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ ಎಂದರು.
ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದ್ದರೂ ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗ, ಸಮುದಾಯಕ್ಕೆ ಸಂಬಂಧಿಸಿದ ಹೋರಾಟ ಇದಾಗಿದೆ. ಕೈಗಾರಿಕೆಯವರಿಂದ ಹಿಡಿದು ರೈತರು, ಕಾರ್ಮಿಕರು, ಕಲಾವಿದರು ಸೇರಿದಂತೆ ಎಲ್ಲರೂ ಈ ಹೋರಾಟದಲ್ಲಿ ಭಾಗವಹಿಸಬಹುದು.
ಒಂದು ಕಾಲದಲ್ಲಿ ಈ ಯೋಜನೆಗೆ ನಾವು ಕೂಡ ಹಣ ನೀಡುತ್ತೇವೆ ಎಂದು ತಮಿಳುನಾಡಿನವರು ನ್ಯಾಯ ಆಡಿದ್ದರು. ಆದರೆ ಅವರ ಹಣ ಬೇಡ. ನಮ್ಮ ಹಣದಲ್ಲೇ ನಾವು ಯೋಜನೆ ಮಾಡುತ್ತೇವೆ. ಈ ಯೋಜನೆಗೆ ಹಾಕುವ ಬಂಡವಾಳ ಅಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಿಂದಲೇ ವಾಪಸ್ ಬರುತ್ತದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅಪಾರ್ಟ್ ಮೆಂಟ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿತ್ಯ 30-40 ಟ್ಯಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಮೇಕೆದಾಟು ಯೋಜನೆಯಿಂದ 2.17 ರೂ.ಗೆ ಒಂದು ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ನಾವು ಈ ವಿಚಾರವಾಗಿ ಹೋರಾಟ ಮಾಡಲೇ ಬೇಕಾಗಿದೆ. ಈ ಐತಿಹಾಸಿಕ ಹೋರಾಟಕ್ಕೆ ನೀವು ಕೈಜೋಡಿಸಿ ಇತಿಹಾಸದ ಭಾಗವಾಗಬೇಕು ಎಂದು ಪ್ರತಿಯಬ್ಬರಲ್ಲೂ ಮನವಿ ಮಾಡುತ್ತೇವೆ ಎಂದರು.
21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ