*ತಾಯಿ ಜೊತೆ ಓಡಿ ಹೋಗಿದ್ದವನನ್ನು 16 ಬಾರಿ ಇರಿದು ಕೊಲೆ: ಪೊಲೀಸರು ಬರುವವರೆಗೂ ಸಿನಿಮಾ ಸ್ಟೈಲ್ ನಲ್ಲಿ ಶವದ ಮೇಲೆ ಹತ್ತಿ ನಿಂತ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಹತ್ತು ವರ್ಷಗಳ ಹಿಂದಿನ ದ್ವೇಷಕ್ಕೆ ವ್ಯಕ್ತಿಯೊಬ್ಬ ಸೇಡು ತೀರಿಸಿಕೊಂಡಿದ್ದು, ತಾಯಿ ಜೊತೆ ಓಡಿ ಹೋಗಿದ್ದ ವ್ಯಕ್ತಿಯನ್ನು 16 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾನು 18 ವರ್ಷದವನಿದ್ದಾಗ ತಾಯಿಯನ್ನು ತನ್ನಿಂದ ದೂರ ಮಾಡಿ ಆಕೆಯೊಂದಿಗೆ ಓಡಿ ಹೋಗಿದ್ದಕ್ಕೆ ಆರೋಪಿ ಈ ಕೃತ್ಯವೆಸಗಿದ್ದಾನೆ. ಕೊಲೆ ಬಳಿಕ ಶವವನ್ನು ಪೊಲೀಸರು ಬರುವರೆಗೂ ಮೆಟ್ಟಿ ನಿಂತಿದ್ದಾನೆ.
ಸಡೋಣಿ ಗ್ರಾಮದ ಬಸಪ್ಪ ಹೊಸಮನಿ (51) ಕೊಲೆಯಾದ ವ್ಯಕ್ತಿ. ಈರಯ್ಯ ಮಠಪತಿ ಕೊಲೆ ಮಾಡಿರುವ ಆರೋಪಿ. ಬಸಪ್ಪ ಹಲವು ವರ್ಷಗಳ ಹಿಂದೆ ಈರಯ್ಯ ತಾಯಿ ಜೊತೆ ಓಡಿ ಹೋಗಿ ಮಹಾರಾಷ್ಟ್ರದಲ್ಲಿ ವಾಸವಾಗಿದ್ದ. ಆತ ಮತ್ತೆ ಗ್ರಾಮಕ್ಕೆ ವಾಪಾಸ್ ಆಗುವುದನ್ನೇ ಕಾದಿದ್ದ ಈರಯ್ಯ 10 ವರ್ಷಗಳ ಬಳಿಕ ಕೊಲೆ ಮಾಡಿದ್ದಾನೆ. ಬಳಿಕ ಸಿನಿಮಾ ಸ್ಟೈಲ್ ನಲ್ಲಿ ಶವದ ಮೇಲೆ ಹತ್ತಿ ನಿಂತಿದ್ದಾನೆ.
ಆರೋಪಿ ಈರಯ್ಯನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

