ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ನನ್ನ ಕ್ಷೇತ್ರದ ಎಲ್ಲಾ ಜನರಿಗೂ ಸ್ವಂತ ಸೂರು ಕಲ್ಪಿಸಿಸಿಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪಿ.ಎಂ.ಎ.ವೈ. – ಎ.ಎಚ್.ಪಿ. ಯೋಜನೆಯಡಿ 2022ರ ವೇಳೆಗೆ ಎಲ್ಲರಿಗೂ ಮನೆ ಕಟ್ಟಿಸಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇನ್ನೂ ಸೂರು ಇಲ್ಲದವರು ಮೇ 10ರೊಳಗಾಗಿ ಅರ್ಜಿ ಸಲ್ಲಿಸಿದಲ್ಲಿ ಅವರಿಗೂ ಸೂರು ಕಲ್ಪಿಸಲಾಗುವುದು ಎಂದರು ವಸತಿರಹಿತ ಫಲಾನುಭವಿಗಳಿಗೆ ಸೂರು ನೀಡುವ ಪಿ.ಎಂ.ಎ.ವೈ. – ಎ.ಎಚ್.ಪಿ. ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿ+2 ಗುಂಪು ಮಾದರಿಯ 2052 ಮನೆಗಳ ಕಾಮಗಾರಿಯನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆಯವರೊಂದಿಗೆ ಭಾನುವಾರ ಪರಿಶೀಲಿಸಿ ಅವರು ಮಾತನಾಡಿದರು.
‘ಕಳೆದ 6 ವರ್ಷಗಳಲ್ಲಿ ರಾಜ್ಯ ಸರಕಾರದಿಂದ ವಿವಿಧ ಯೋಜನೆಯಡಿ ಗ್ರಾಮೀಣ ಭಾಗದಲ್ಲಿಯ ಸುಮಾರು 7-8 ಸಾವಿರ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗಿದೆ. ರಾಜೀವ ಗಾಂಧಿ ವಸತಿ ಯೋಜನೆಯಡಿ ಜಿ+2 ಗುಂಪು ಮಾದರಿಯ 2052 ಮನೆಗಳ ಆರಂಭಗೊಂಡಿರುವ ಕಾಮಗಾರಿ ಭರದಲ್ಲಿ ಸಾಗಿದೆ. ಹಂತಹಂತವಾಗಿ ವಂತಿಗೆ ತುಂಬಿದ 852 ಲಾಭಾರ್ಥಿಗಳ ಕನಸ್ಸಿನ ಮನೆಗಳ ಕಾಮಗಾರಿ ಪ್ರಕ್ರಿಯೆಯಲ್ಲಿದೆ. ಎರಡು ಬಿಎಚ್‍ಕೆ ಎಲ್ಲ ವಸತಿಗಳು ನೋಂದಣಿಯಾಗಿವೆ. ಒಂದು ಬಿಎಚ್‍ಕೆ ಕೇವಲ ಕೆಲವೇ ಮನೆಗಳು ಬಾಕಿಯಿದ್ದು ಸೂರು ಇಲ್ಲದವರು ಮೇ 10ರೊಳಗಾಗಿ ಅರ್ಜಿ ಸಲ್ಲಿಸಬೇಕು’ ಎಂದು ಮನವಿ ಮಾಡಿಕೊಂಡರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ‘ಕಳೆದ 30 ವರ್ಷಗಳಿಂದ ತಮ್ಮ ಸ್ವಂತ ಮನೆಯಾಗಬೇಕೆಂದು ಪ್ರಯತ್ನಿಸುತ್ತಿದ್ದವರಿಗೆ ಈಗ ವಸತಿ ಭಾಗ್ಯ ಸಿಗುತ್ತಿದೆ. ಪಿಎಂಎವೈ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಒನ್ ಬಿಎಚ್‍ಕೆಯ ಒಂದು ಮನೆಗೆ ರೂ.6.81 ಲಕ್ಷ ವೆಚ್ಚ ತಗುಲುತ್ತದೆ. ಪ್ರತಿಯೊಬ್ಬ ಫಲಾನುಭವಿಗಳಿಗೆ ಕೇಂದ್ರ ಸರಕಾರದಿಂದ ರೂ.1.20 ಲಕ್ಷ ಮತ್ತು ರಾಜ್ಯ ಸರಕಾರದಿಂದ ರೂ.1.50 ಲಕ್ಷ ಅನುದಾನ ಸಿಗುತ್ತದೆ. ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ತೆಗೆದ ನಂತರ ಫಲಾನುಭವಿಗಳಿಗೆ ತಲಾ ರೂ.2 ಲಕ್ಷ ಸಹಾಯಧನ ಸಿಗುತ್ತದೆ. ರೂ.1.51 ಲಕ್ಷ ಬ್ಯಾಂಕ್‍ನಿಂದ ಸಾಲ ಸಿಗಲಿದೆ. ಇಲ್ಲಿಯವರೆಗೆ ಸುಮಾರು 60-70 ಫಲಾನುಭವಿಗಳಿಗೆ ಸಾಲ ಮಂಜೂರಾತಿಯಾಗಿದೆ. ಮುಂಬರುವ ದಿನಗಳಲ್ಲಿ ನಗರಸಭೆಯ ಸರ್ವಸಾಮಾನ್ಯ ಸಭೆಯಲ್ಲಿ ಈ ಪರಿಸರಕ್ಕೆ ನಾಮಕರಣ ಮಾಡಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಮಹಾವೀರ ಬೋರನ್ನವರ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮತ್ತು ಸದಸ್ಯರು, ಗೋಪಾಳ ನಾಯಿಕ, ದೀಪಕ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ