ಪ್ರವಾಹಬಾಧಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ; ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೃಷ್ಣಾ ನದಿತೀರದಲ್ಲಿರುವ ಈ ಹಿಂದೆ ಪ್ರವಾಹದಿಂದ ಬಾಧಿತಗೊಂಡಿದ್ದ ಚಿಕ್ಕೋಡಿ ಹಾಗೂ ಕಾಗವಾಡ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ನಿರ್ವಹಣೆ ಕುರಿತು ಪರಿಶೀಲಿಸಿದರು.
ಚಿಕ್ಕೋಡಿಯಿಂದ ಮೊದಲು ಮಾಂಜರಿ ಸೇತುವೆಗೆ ಭೇಟಿ ನೀಡಿದ ಅವರು, ಇತ್ತೀಚಿನ ಮಳೆಯಿಂದ ಕೃಷ್ಣಾ ನದಿಯಲ್ಲಿ ಉಂಟಾಗಿರುವ ನೀರಿನ ಹರಿವು ಹೆಚ್ಚಳವನ್ನು ವೀಕ್ಷಿಸಿದರು.
ನಂತರ ಯಡೂರ, ಇಂಗಳಿ, ಕಾಗವಾಡ ತಾಲ್ಲೂಕಿನ ಮಂಗಾವತಿ ಹಾಗೂ ಜುಗುಳ ಗ್ರಾಮಗಳಿಗೆ ಭೇಟಿ ನೀಡಿ 2019 ಹಾಗೂ 2021 ರ ಪ್ರವಾಹ ಸಂದರ್ಭದಲ್ಲಿ ಎಲ್ಲಿಯವರೆಗೆ ಮುಳುಗಡೆಯಾಗಿತ್ತು ಎಂಬುದರ ಕುರಿತು ಗ್ರಾಮಸ್ಥರು ಹಾಗೂ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ:
ಮಳೆಗಾಲ ಆರಂಭವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೆರೆಯ ರಾಜ್ಯದ ಜಲಾಶಯಗಳಿಂದ ನೀರು ಬಿಡುಗಡೆ ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು.
ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಈ ಕುರಿತು ಜಿಲ್ಲಾಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೂಡ ಸಭೆಗಳನ್ನು ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗಿರುತ್ತದೆ.
ಆ ಪ್ರಕಾರ ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು. ಜನರ ರಕ್ಷಣೆಗಾಗಿ ಅಗತ್ಯವಿರುವ ಬೋಟ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಚಿಕ್ಕೋಡಿಯಲ್ಲಿ ಸಾಕಷ್ಟು ಸಂಖ್ಯೆಯ ಬೋಟ್ ಗಳಿವೆ. ಆದಾಗ್ಯೂ ಹೆಚ್ಚುವರಿ ಬೋಟ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಹಳೆ ಬೋಟ್ ಗಳ ದುರಸ್ತಿ ಮಾಡಿಸಿಟ್ಟುಕೊಳ್ಳಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಡಿಭಾಗದಲ್ಲಿ ಕೃಷ್ಣಾ ನದಿ ನೀರು ಮಾಪನ ಕೇಂದ್ರಕ್ಕೂ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು.
ಗ್ರಾಮಸ್ಥರ ಸಹಕಾರ ಕೋರಿಕೆ:
ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರ ಜತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ನದಿತೀರದ ಗ್ರಾಮಸ್ಥರು ಅಧಿಕಾರಿಗಳು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಯಾವುದೇ ರೀತಿಯ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಪ್ರವಾಹದಿಂದ ಪೀಡಿತಗೊಳ್ಳುವ ನದಿತೀರದ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಳೆಯ ಪ್ರಮಾಣ, ನದಿಯ ನೀರಿನ ಹರಿವು ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ಮಹಾರಾಷ್ಟ್ರದ ಜತೆ ಸಮನ್ವಯ ಸಾಧಿಸಲು ಅನುಕೂಲವಾಗುವಂತೆ ಪೂರ್ವಭಾವಿಯಾಗಿ ಬೆಳಗಾವಿ ಜಿಲ್ಲೆಯ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯನ್ನು ಮಂಗಳವಾರ(ಮೇ 24) ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೇರಿದಂತೆ ವಿವಿಧ ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಲುಲು ಗ್ರೂಪ್ ನೊಂದಿಗೆ 2000 ಕೋಟಿ ರೂ. ಹೂಡಿಕೆ ಒಪ್ಪಂದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ