ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಪೀರನವಾಡಿಯಲ್ಲಿ ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಪೀರನವಾಡಿಯಲ್ಲಿ ಒಂದೆಡೆ ಶಿವಾಜಿ ಮಹಾರಾಜ್ ಪ್ರತಿಮೆಯಿದ್ದು ಇನ್ನೊಂದೆಡೆ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಹಿನ್ನಲೆಯಲ್ಲಿ ಪೀರನವಾಡಿಯಲ್ಲಿ ರಾಯಣ್ಣ ಅಭಿಮಾನಿಗಳು ಹಾಗೂ ಮರಾಠಿ ಭಾಷಿಕ ಮುಖಂಡರು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಂಗೊಳ್ಳಿ ರಾಯಣ್ಣ ಧ್ವಜ ಹಿಡಿದು ಬಂದ ಜನರ ಮೇಲೆ ಹಾಗೂ ಇತರ ಗುಂಪುಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ಸೀಮಾ ಲಾಟ್ಕರ್ ಭೇಟಿ ನೀಡಿದ್ದು, ಸ್ಥಳದಲ್ಲಿ ಜನರು ಜಮಾವಣೆಗೊಳ್ಳದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಇಂದು ಅಥವಾ ನಾಳೆ ಮೂರ್ತಿ ಪ್ರತಿಷ್ಠಾಪನೆಯಾಗಬೇಕಿತ್ತು. ಬದಲಾಗಿ ಇಂದೇ ಮೂರ್ತಿ ಸ್ಥಾಪನೆಯಾಗಿದೆ. ಅನಗತ್ಯವಾಗಿ ಖ್ಯಾತೆ ತೆಗೆಯಬೇಡಿ ಎಂದು ಡಿಸಿಪಿ ಸ್ಥಳೀಯ ಮರಾಠಿ ಭಾಷಿಕ ಮುಖಂಡರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಸ್ಥಳಕ್ಕೆ ಪೊಲೀಸ್ ಆಯುಕ್ತ ತ್ಯಾಗರಾಜನ್ ಭೇಟಿ ನೀಡಿದ್ದು, ಜಮಾವಣೆಗೊಂಡಿರುವ ಜನರ ಜತೆ ಮಾತುಕತೆ ಮೂಲಕ ಮನವಲಿಕೆ ಮಾಡಿ ವಾಪಸ್ ಕಳಿಸುವ ಯತ್ನ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ