*ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅಪ್ತಾಪ್ರ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದರಲ್ಲಿ ನಾಲ್ವರು ಆರೋಪಿಗಳನ್ನು ಅಪರಾಧಿ ಎಂದು ಘೋಷಿಸಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಮತ್ತಿಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸುವ ಮೂಲಕ ಬೆಳಗಾವಿಯ ವಿಶೇಷ ಶೀಘ್ರಗತಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
2025ರ ಮೇ. 10ರಂದು ಮಧ್ಯಾಹ್ನ ಬಾಲಕಿಯನ್ನು ಪುಸಲಾಯಿಸಿ ಗೆಳೆತನ ಬೆಳೆಸಿ ಅಪಹರಿಸಿ ಸಾಂವಗಾಂವದ ತೋಟದ ಮನೆಗೆ ಕರೆದೊಯ್ದು ಅಲ್ಲಿ ಆಕೆಗೆ ಮದ್ಯ ಕುಡಿಸಿ ಅಸಭ್ಯವಾಗಿ ವರ್ತಿಸಿ ನಂತರ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಸಂತ್ರಸ್ತೆ ಅಪ್ರಾಪ್ತ ಬಾಲಕಿಯ ತಾಯಿ ತಿಲಕವಾಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸಾಕೀಬ್ ಬೇಗ್‌ಫಯಾಜ ನಿಜಾಮಿ (22) ಗಾಂಧಿನಗರ ಬೆಳಗಾವಿ, ರವಿ ಸಿದ್ದಪ್ಪ ನಾಯ್ಕೋಡಿ (34) ರಾಜಾರಾಮನಗರ, ಉದ್ಯಮಭಾಗ ಹಾಗೂ ಇನ್ನಿಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ತೋಟದ ಮನೆಯಲ್ಲಿ ಬಾಲಕಿಯನ್ನು ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದರು.
ನಂತರ ಬಾಲಕಿಯ ಕುತ್ತಿಗೆಯಲ್ಲಿದ್ದ ಒಂದು ತೊಲೆ ಬಂಗಾರದ ಸರವನ್ನು ಕಿತ್ತುಕೊಂಡಿದ್ದರು ಎಂದು ದೂರಿನಲಿ ದಾಖಲಿಸಲಾಗಿತ್ತು. ಸಾಂವಗಾಂವದ ನಿವಾಸಿಗಳಾದ ರೋಹನ ರಾಜೇಶ ಕುಮಾರ ಪಾಟೀಲ,(23) ಆಶುತೋಷ ಮಾರುತಿ ಪಾಟೀಲ (25) ಅವರು ಆರೋಪಿಗಳಿಗೆ ತಮ್ಮ ಫಾರ್ಮಹೌಸನ್ನು ಬಾಡಿಗೆಗೆ ಕೊಟ್ಟಿದ್ದರು. ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಲ್ಲಿ ಪೊಲೀಸ ಅಧಿಕಾರಿಯ ಮಗನೂ ಶಾಮೀಲಾಗಿದ್ದರಿಂದ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವೂ ನಡೆದಿತ್ತು.
ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಗ್ಯಾಂಗ್ ರೇಪ್ ಪ್ರಕರಣವನ್ನು ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪುಷ್ಪಲತ ಅವರು, 17 ಸಾಕ್ಷಿಗಳ ವಿಚಾರಣೆ, 124 ದಾಖಲೆಗಳು ಹಾಗೂ 5 ಮುದ್ದೆಮಾಲು ಆಧಾರದಲ್ಲಿ ಆಪರಾಧ ಸಾಬೀತಾಗಿರುವುದಾಗಿ ಆದೇಶಿಸಿ, ಸಾಕೀಬ್ ಬೇಗ್‌ಫಯಾಜ ನಿಜಾಮಿ (22) ಗಾಂಧಿನಗರ ಬೆಳಗಾವಿ, ರವಿ ಸಿದ್ದಪ್ಪ ನಾಯ್ಕೋಡಿ ಉದ್ಯಮಭಾಗ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ೮,೭೬೦೦೦ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸಾಂವಗಾಂವದ ತೋಟದ ಮನೆಯ ರೋಹನ ರಾಜೇಶ ಕುಮಾರ ಪಾಟೀಲ(23) ಆಶುತೋಷ ಮಾರುತಿ ಪಾಟೀಲ (25)ರಿಗೆ 20 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಹಾಗೂ ತಲಾ 60000 ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್. ವಿ ಪಾಟೀಲ ಅವರು ವಾದ ಮಂಡಿಸಿದರು.



