Latest

ರಾಷ್ಟ್ರೀಯ ವಯೋಶ್ರೀ ಯೋಜನೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಿವ್ಯಾಂಗರು ಹಾಗೂ ಹಿರಿಯರಿಗಾಗಿ ಕೇಂದ್ರ ಸರಕಾರವು ಅನೇಕ‌ ಯೋಜನೆಗಳನ್ನು‌ ಜಾರಿಗೆ ತಂದಿದ್ದು, ದೇಶದ ಪ್ರಧಾನಿಗಳು ದಿವ್ಯಾಂಗರಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ನಗರದ ವಿದ್ಯಾಧಿರಾಜ್ ಸಭಾಗೃಹದಲ್ಲಿ ನಡೆದ ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿಕಲ ಚೇತನರ ಹಾಗೂ ಹಿರಿಯ‌ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಕೃತಕ ಅಂಗಾಂಗ ತಯಾರಿಕಾ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಸಂಸ್ಥೆ ಆಯೋಜಿಸಿದ್ದ ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೇಷ್ಠ ಸನ್ಮಾನ ಯೋಜನೆಯ ಭಾಗವಾಗಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಹಾಗೂ ವಿತರಣಾ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು.

ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿಯವರ ಸರಕಾರವು ಅಂಗವಿಕಲರ ಹಕ್ಕುಗಳ ಕಾಯ್ದೆ 2015 ರಲ್ಲಿ ಅನುಮೋದಿಸಲಾದ ಶೇ.3 ರಷ್ಟು ಮೀಸಲಾತಿಯನ್ನು ಶೇ.4 ಕ್ಕೆ ಹೆಚ್ಚಳ ಮಾಡಿದೆ. ದಿವ್ಯಾಂಗರಿಗೆ ತಲಾ 1 ಲಕ್ಷ ವಿಮಾ ಯೋಜನೆಯನ್ನು ನೀಡಲಾಗುತ್ತಿದೆ. ಅಲ್ಲದೇ, ಮೆಟ್ರಿಕ್ ನಂತರದ ದಿವ್ಯಾಂಗರಿಗೆ ಮಾಸಾಶನ ನೀಡಲಾಗುವುದು‌ ಎಂದು ಅವರು ತಿಳಿಸಿದರು.

ದಿವ್ಯಾಂಗರಿಗಾಗಿ 7,000 ಕ್ಕಿಂತಲೂ ಹೆಚ್ಚು ಶಿಬಿರಗಳ ‌ಆಯೋಜನೆ‌:

ನ್ಯಾಯ ಮತ್ತು ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ಇದುವರೆಗೆ ದಿವ್ಯಾಂಗರಿಗಾಗಿ 7,000 ಕ್ಕಿಂತಲೂ ಹೆಚ್ಚು ಶಿಬಿರಗಳನ್ನು ಆಯೋಜಿಸಲಾಗಿದೆ. ಸುಮಾರು 9 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಿದೆ. ದೇಶದಲ್ಲಿರುವ 2,500 ಕ್ಕೂ ಹೆಚ್ಚು ಸರಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾಂಗರಿಗೆ ಅನುಕೂಲವಾಗುವಂತೆ ಅವಶ್ಯಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಪ್ರಧಾ‌ನ ಮಂತ್ರಿಗಳು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಪರಿಸರ ಇಲಾಖೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮೂಲಭೂತ ಸೌಕರ್ಯಗಳಿಗೆ 100 ಲಕ್ಷ ಕೋಟಿ ರೂ. ನೀಡಲಾಗಿದೆ. ಇದರಿಂದ ಮೂಲಭೂತ ಸೌಕರ್ಯಗಳು 19 ಪಟ್ಟು ಹೆಚ್ಚಾಗಿವೆ ಎಂದು ಅವರು ತಿಳಿಸಿದರು.

ಪ್ಯಾರಾ ಒಲಂಪಿಕ್ಸ್ ಗೆ ಮಹತ್ವ :

ಈ ಬಾರಿ ಕೇವಲ ಒಲಂಪಿಕ್ಸ್ ಮಾತ್ರವಲ್ಲದೇ, ಪ್ಯಾರಾ ಒಲಂಪಿಕ್ಸ್ ಗೂ ಸಹ ಹೆಚ್ಚಿನ ಗಮನ ನೀಡಲಾಗಿದೆ. ಪ್ರಥಮ ಬಾರಿ ನಮ್ಮ ದೇಶವು ಪ್ಯಾರಾ ಒಲಂಪಿಕ್ಸ್ ನಲ್ಲಿ 15 ಪದಕಗಳನ್ನು ಪಡೆದುಕೊಂಡಿದೆ. ಭಾರತ ಸರಕಾರದಿಂದ‌ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ‌‌‌ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ದಿವ್ಯಾಂಗರು ಜೀವನೋತ್ಸಾಹಕ್ಕೆ ಸ್ಪೂರ್ತಿ:

ಹಿರಿಯರನ್ನು ಇಂದಿನ ಜನಾಂಗ ಕಡೆಗಣಿಸಬಾರದು. ಜೀವನೋತ್ಸಾಹವನ್ನು ದಿವ್ಯಾಂಗರಿಂದ ಕಲಿಯಬೇಕು. ಇಂದು ಅನೇಕ ಜನರು ಮಾನಸಿಕ ಒತ್ತಡದಿಂದ‌ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ದಿವ್ಯಾಂಗರು ಆತ್ಮವಿಶ್ವಾಸದಿಂದ‌ ಜೀವನ ನಡೆಸುತ್ತಾರೆ. ಅವರು ನಮ್ಮೆಲ್ಲರಿಗೆ ಸ್ಪೂರ್ತಿ ಎಂದು ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಬೆಳಗಾವಿಯ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಹಕಾರ :

ಬೆಳಗಾವಿಯ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಬೆಳಗಾವಿ ಸ್ಮಾರ್ಟ್ ಸಿಟಿ ಕಾರ್ಯಪಗ್ರತಿಯ ಕುರಿತು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಅ.ನಾರಾಯಣಸ್ವಾಮಿ ಅವರು ರಾಷ್ಟ್ರೀಯ ಯೋಜನೆಯಡಿ ಹಿರಿಯ ನಾಗರಿಕರಿಗೆ ಅವಶ್ಯಕ ಉಪಕರಣಗಳನ್ನು ಅಲಿಂಕೋ ಸಂಸ್ಥೆಯಿಂದ ವಿತರಿಸಲಾಗುತ್ತಿದೆ.

ಅಲಿಂಕೋ ಸಂಸ್ಥೆಯ ಕಾರ್ಯ ಶ್ಲಾಘನೀಯ :

ಅಲಿಂಕೋ ಸಂಸ್ಥೆ ಹಿರಿಯರಿಗೆ ಅವಶ್ಯಕ ವಸ್ತುಗಳನ್ನು ನೀಡುಲು 1970 ರಲ್ಲಿ ಸ್ಥಾಪನೆಯಾಯಿತು. ಇಂಡೋ-ಪಾಕ್ ಯುದ್ಧದಲ್ಲಿ ವಿಕಲಚೇತನರಾದವರಿಗೆ ಅವಶ್ಯಕ ಸಲಕರಣೆಗಳನ್ನು ನೀಡಲು ಈ ಸಂಸ್ಥೆಯನ್ನು ಆರಂಭಿಸಲಾಯಿತು. ಇಂದಿನ ಕಾರ್ಯಕ್ರಮದ ಅಡಿಯಲ್ಲಿ 2345 ಫಲಾನುಭವಿಗಳಿಗೆ ವಿವಿಧ ಉಪಕರಣಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ವಿದೇಶಗಳಿಂದ ಆಮದು ಮಾಡಿಕೊಳ್ಳದೇ ನಮ್ಮ ದೇಶದಲ್ಲಿಯೇ ತಾಂತ್ರಿಕವಾಗಿ ಉತ್ತಮವಾದ ಸಲಕರಣೆಗಳನ್ನು‌ ತಯಾರಿಸಲಾಗುತ್ತಿದೆ. ಹಿರಿಯ ನಾಗರಿಕರಿಗಾಗಿ ಸರಕಾರ ಸಹಾಯವಾಣಿಯನ್ನು ಆರಂಭಿಸಿದೆ. ಅಂಗವಿಕಲರಿಗೆ, ಹಿರಿಯರಿಗೆ ಸರಕಾರದಿಂದ ಸಂಪೂರ್ಣ‌ ಸಹಾಯ ಮಾಡಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಅ.ನಾರಾಯಣಸ್ವಾಮಿ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದ ಲೋಕಸಭಾ ಸದಸ್ಯರಾದ ಮಂಗಳಾ ಅಂಗಡಿ, ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ವಿವಿಧ ಸಲಕರಣೆಗ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಶಾಸಕರಾದ ಅನೀಲ ಬೆನಕೆ ಯೋಜನೆಯ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿವಿಧ ಅವಶ್ಯಕ ಉಪಕರಣಗಳ ವಿತರಣೆ:

ಈ ಸಂದರ್ಭದಲ್ಲಿ , ಸಾಂಕೇತಿಕವಾಗಿ ದಿವ್ಯಾಂಗರಿಗೆ ಕೃತಕ ‌ದಂತ ಪಂಕ್ತಿ, ಕಿವಿಯ ಯಂತ್ರಗಳು,ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ದಕ್ಷಿಣ ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಆವಾಸ್ ಪರ್ ಸಂವಾದ ಕಾರ್ಯಗಾರದ ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button