
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕಿಗೆ ಆಂಧ್ರಪ್ರದೇಶದ ನೆಲ್ಲೂರಿನ ಆನಂದಯ್ಯ ಆಯುರ್ವೇದ ಔಷಧ ಪ್ರಸಿದ್ಧಿ ಪಡೆದ ಬೆನ್ನಲ್ಲೇ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಣಲಿಂಗ ಸ್ವಾಮೀಜಿಯವರ ವನಸ್ಪತಿ ಕಾಡಾ ಹೆಚ್ಚು ಸುದ್ದಿಯಾಗುತ್ತಿದೆ.
ನಿಪ್ಪಾಣಿ ಬಳಿಯ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿಗಳು ತಮ್ಮ ಸುತ್ತ ಮುತ್ತಲಿನ ಊರಿನ ಜನರಿಗಾಗಿ ಕೊರೊನಾ ಸೋಂಕು ನಿವಾರಣೆಗೆ ವಿಶೇಷ ವನಸ್ಪತಿ ಕಾಡಾ ತಯಾರಿಸಿ ವಿತರಿಸುತ್ತಿದ್ದು, ಸಾವಿರಾರು ಜನರು ಈ ಕಾಡಾ ಸೇವಿಸಿ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ. 21ಕ್ಕೂ ಹೆಚ್ಚು ವನಸ್ಪತಿ ಉಪಯೋಗಿಸಿ ಬಿಸಿ ಬಿಸಿ ಕಾಡಾ ತಯಾರು ಮಾಡಿ ಅತೀ ಹೆಚ್ಚು ಕರೋನಾ ಉಲ್ಬಣಿಸಿದ ಶಿರುಗುಪ್ಪಿ ಗ್ರಾಮದ ಜನರಿಗೆ ಈ ಕಾಡಾ ವಿತರಿಸಲಾಗಿದ್ದು, ಕೋವಿಡ್ ಗೆ ಪರಿಣಾಮಕಾರಿ ಔಷಧಿ ಎಂದು ಹೇಳಲಾಗುತ್ತಿದೆ.
ಈಗಾಗಲೇ 30ಕ್ಕೂ ಹೆಚ್ಚು ಗ್ರಾಮದ ಜನರಿಗೆ ಕಾಡ ವಿತರಿಸಲಾಗಿದ್ದು, ವಿಶ್ವ ಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರು ಸಹ ಸ್ವತಃ ಸ್ವಾಮೀಜಿಯವರ ಕಾಡಾ ತಯಾರಿಕಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದೀಗ ಪ್ರಾಣಲಿಂಗ ಸ್ವಾಮೀಜಿ ಬೆಳಗಾವಿಯ ಹಿಂಡಲಗಾ ಊರಿನಲ್ಲಿ 50ಲೀಟರ್ ಕಾಡಾ ತಯಾರಿಸಿ 500ಜನರಿಗೆ ವಿತರಿಸಿದ್ದು, ಕೋವಿಡ್ ಗೆ ಪರಿಣಾಮಕಾರಿ ಔಷಧ ಎಂದು ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಅನಿಲ ಹಿಂಡಲಗೇಕರ, ಆನಂದ ಭಾಂಡಗೆ ಸೇರಿದಂತೆ ಊರಿನ ಯುವಕರು ಸೇರಿ 500ಲೀಟರ್ ಕಾಡಾ ತಯಾರಿಸಿ 5000 ಜನರಿಗೆವಿತರಿಸಿದ್ದು, ಶ್ರೀ ಚಿತ್ತಪ್ರಕಾಶಾನಂದ ಸ್ವಾಮೀಜಿಯವರ ಅಮೃತ ಹಸ್ತದಿಂದ ಈ ಕಾಡಾ ತಯಾರಿಕೆ ಪ್ರಾರಂಭಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀಗಳು, 21 ತರಹದ ವನಸ್ಪತಿ ಕುದಿಸಿ ಮಾಡಿದ ಕಾಡಾ ಇದಾಗಿದ್ದು, ಕೇವಲ ಕರೋನಾ ಒಂದೇ ಅಲ್ಲ ನಾನಾ ರೋಗಗಳನ್ನು ಗುಣಪಡಿಸುವ ಶಕ್ತಿ ಇದರಲ್ಲಿದೆ. ಕೊರೊನಾದಿಂದ ಬಳಲುತ್ತಿರುವ ಹಲವರಿಗೆ ಆಸ್ಪತ್ರೆಗಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಲು ಸಾಧ್ಯವಿಲ್ಲ ಕೊರೊನಾ 3ನೇ ಅಲೆ ಬರವ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡುತ್ತಿರುವ ಇಂತಹ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಕಾಡಾ ತಯಾರಿಸಿ ಹಂಚುವ ಸೇವಾಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.
ಕಾಡಾ ಹಂಚುವ ಸೇವಾ ಕಾರ್ಯ ಪ್ರತಿ ಊರಲ್ಲಿ ಆಗಬೇಕು. ಎಲ್ಲರೂ ಆರೋಗ್ಯಕರ ಆಯುರ್ವೇದ ಕಾಡಾ ಸೇವಿಸಿ ಬೇರೆಯವರಿಗೂ ನೀಡುವ ರೀತಿ ಅಂದೋಲನ ನಡೆಸಬೇಕಿದೆ. ಈ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಬೇರೆಯವರಿಗೆ ಸಹಾಯ ಮಾಡೋಣ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್, ಭಾಗ್ಯಶ್ರೀ ಕೋಕಿತಕರ, ನಾಗೇಶ ಮೂನ್ನೋಳಕರ, ಮನೋಹರ ಕಡೋಲ್ಕರ ನೂರಾರು ಮಾತೆಯರು ಉಪಸ್ತಿತರಿದ್ದು ಸ್ವತಃ ಸ್ವಾಮೀಜಿಯವರೇ ಕಾಡಾ ವಿತರಿಸುವ ಮೂಲಕ ಹಿಂಡಲಗಾ ಊರಿನ 5000 ಜನರಿಗೆ ಕಾಡಾ ತಲುಪಿಸುವ ವ್ಯವಸ್ಥೆ ಮಾಡಲಾಯಿತು.
ಕರ್ನಾಟಕ -ಮಹಾರಾಷ್ಟ್ರ ನಡುವೆ ಕುಡಿಯುವ ನೀರಿನ ವಿನಿಮಯ ಒಪ್ಪಂದಕ್ಕೆ ಸಮ್ಮತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ