ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಗತ್ತಿನ ಜ್ವಲಂತ ಸಮಸ್ಯೆಗಳಲ್ಲಿ ಸೈಬರ್ ದಾಳಿಯೂ ಒಂದು. ಸೈಬರ್ ದಾಳಿಯು ಇಂದು ವೈರಿ ದೇಶವನ್ನು ಮಟ್ಟ ಹಾಕಲು ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ ಎಂದು ಪ್ರಾಧ್ಯಾಪಕ ಸಾಗರ್ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದವತಿಯಂದ ಸೈಬರ್ ಅಪರಾಧದ ಕುರಿತು ಒಂದು ದಿನದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ಸಾಗರ್‍ಗೌಡ ಪಾಟೀಲ ಮಾತನಾಡುತ್ತ, ಜಗತ್ತು ಇಂದಿನ ಕರೋನ ಸಾಂಕ್ರಮಿಕ ರೋಗದಿಂದ ಬಳಲುತ್ತಿರುವುದರಿಂದ ಅನಿವಾರ್ಯವಾಗಿ ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದೆ. ಅದೇ ರೀತಿ ಸೈಬರ್ ಅಪರಾಧವೂ ಕೂಡ ಗಣನೀಯವಾಗಿ ಹೆಚ್ಚುತ್ತಿದೆ. ಜಗತ್ತಿನ ಯಾವುದೇ ಒಂದು ಮೂಲೆಯಲ್ಲಿ ಕುಳಿತು ಸೈಬರ್ ಹ್ಯಾಕರರು ಜನರ ಹಣ, ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ. ಈ ದಾಳಿಗಳಿಂದ ಅಂತರ್ಜಾಲಾಧಾರಿತ ಸೇವೆಗಳ ಆಡಳಿತ ವ್ಯವಸ್ಥೆಗಳು ಅಸ್ತವ್ಯಸ್ತವಾಗುತ್ತಿವೆ. ಅಪರಾಧಿಗಳ ಸುಳಿವು ಹುಡುಕುವುದು ಬಲು ಕಷ್ಟವಾಗಿದೆ. ಆದರೆ ಅವುಗಳನ್ನು ತಡೆಯಲು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ. ಜಯಪ್ಪ ಅವರು ಪ್ರಸ್ತುತ ಶೈಕ್ಷಣಿಕ, ಆಡಳಿತಾತ್ಮಕ, ವೈಜ್ಞಾನಿಕ ಕ್ಷೇತ್ರಗಳ ಮೇಲೆ ಸೈಬರ್ ದಾಳಿಗಳು ವಿಪರೀತವಾಗಿ ನಡೆಯುತ್ತಿವೆ. ಹೀಗೆ ಮಾಡುವ ಮೂಲಕ ದೇಶದ ಅಭಿವೃದ್ಧಿಯನ್ನು ತಡೆಯುವುದು ಅವರ ಉದ್ದೇಶವಾಗಿದೆ. ಇತ್ತೀಚಿನ ಅಮೇರಿಕಾದ ಬಹುದೊಡ್ಡ ಇಂಧನ ಪೂರೈಕೆ ಮಾಡುವ ಕಲೋನಿಯಲ್ ಪೈಪ್‍ಲೈನ್ ಕಂಪನಿಯ ಕಂಪ್ಯೂಟರ್ ವ್ಯವಸ್ಥೆಯ ಮೇಲಿನ ಸೈಬರ್ ದಾಳಿ, ಭಾರತದ ವಿದ್ಯುತ್ ಜಾಲದ ಮೇಲಿನ ಚೀನಾ ದಾಳಿ, ಏರ್ ಇಂಡಿಯಾ ಡೇಟಾ ಪ್ರೊಸೆಸರ್ ಮೇಲಿನ ದಾಳಿಗಳು ಜಗತ್ತನ್ನು ತಲ್ಲಣಗೊಳಿಸಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧವನ್ನು ಬೇಧಿಸಲು ಮೂಲಸೌಕರ್ಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಉನ್ನತೀಕರಿಸಬೇಕು ಎಂದರು.
ಉಪಪ್ರಾಚಾರ್ಯರಾದ ಅನಿಲ್ ರಾಮದುರ್ಗ ಸ್ವಾಗತಿಸಿದರು. ಗಣಕವಿಜ್ಞಾನದ ಅಧ್ಯಾಪಕರುಗಳಾದ ಚೇತನ್ ಗಂಗಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಡಾ. ಜ್ಯೋತಿ ಪಾಟೀಲ್ ನಿರೂಪಿಸಿದರು, ಸಚಿನ್ ಹಿರೇಮಠ ವಂದಿಸಿದರು.
ಕೊರೊನಾ 3ನೇ ಅಲೆ; ರಾಜ್ಯ ಸರ್ಕಾರದಿಂದ ಹೈ ಅಲರ್ಟ್; ಕರ್ಫ್ಯೂ ಜಾರಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ