ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಡಗಾವಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ್ ಜ್ಯೋತಿ ಬೆಳಗಿಸಿ ಹಾಗೂ ಮಗುವಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಂಕರಗೌಡ ಪಾಟೀಲ್, ಎಲ್ಲಾ ಇಲಾಖೆ ಅಧಿಕಾರಿ ವರ್ಗದವರು ಐದು ವರ್ಷದ ಒಳಗಿನ ಪ್ರತಿಯೊಂದು ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿಬೇಕು. ಯಾವ ಮಗುವು ಕೂಡ ಅಂಗವಿಕಲ ಆಗಬಾರದರು. ನಮ್ಮ ದೇಶದ ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೇಶದ ಭವಿಷ್ಯ ಗಟ್ಟಿಯಾಗಿರುತ್ತದೆ. ಹೀಗಾಗಿ ಪಾಲಕರು-ಪೋಷಕರು ಜವಾಬ್ದಾರಿಯಿಂದ ತಮ್ಮ ಐದು ವರ್ಷದ ಮಕ್ಕಳಿಕೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಮಾತನಾಡಿ, ಪ್ರತಿಯೊಂದು ಮಗು ಕೂಡ ದೇಶದ ಸಂಪತ್ತು. ಪೋಲಿಯೋ ಅಭಿಯಾನವು ದೇಶದಲ್ಲಿ ಆಂದೋಲನ ರೀತಿಯಲ್ಲಿ ನಡೆಯುತ್ತಿದೆ. ಎಲ್ಲರೂ ಇದರ ಯಶಸ್ಸಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಇನ್ನು ಕೊರೊನಾ ಮಹಾಮಾರಿ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ. ಹೀಗಾಗಿ ಎಲ್ಲರೂ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಕರೆ ನೀಡಿದರು.
ನಂತರ ಡಾ.ಐ.ಪಿ.ಗಡಾದ್ ಮಾತನಾಡಿ, ಪಲ್ಸ್ ಪೋಲಿಯೋ ಅಭಿಯಾನದ ಮೂಲಕ ಪೋಲಿಯೋ ಎಂಬ ಮಹಾಮಾರಿಯನ್ನು ನಮ್ಮ ದೇಶದಿಂದ ಓಡಿಸಿದ್ದೇವೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
2011 ಜನವರಿ 13ರಂದು ಪಶ್ಚಿಮ ಬಂಗಾಲದಲ್ಲಿ ಒಂದು ಪೋಲಿಯೋ ಕೇಸ್ ಕಂಡು ಬಂದಿರುವುದೇ ಕೊನೆಯದು. ಅದೇ ರೀತಿ ರಾಜ್ಯದಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ 2007ರಲ್ಲಿ ಒಂದು ಕೇಸ್ ಹಾಗೂ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಆನೆಗುಂದಿ ತಾಂಡಾದಲ್ಲಿ 1998ರಲ್ಲಿ ಕೊನೆಯ ಕೇಸ್ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಯಾವುದೇ ಪೋಲಿಯೋ ಕೇಸ್ ಕಂಡು ಬಂದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಸ್.ವ್ಹಿ.ಮುನ್ಯಾಳ,ವಹಿಸಿದ್ದರು.
ಎಸ್‍ಎಮ್‍ಓ ಡಾ.ಸಿದ್ಧಲಿಂಗಯ್ಯ, ಡಾ.ಸಂಜಯ್ ಡುಮ್ಮಗೋಳ,ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ, ತಾಲೂಕಾ ಆರೋಗ್ಯಧಿಕಾರಿ ಎಂ.ಎಸ್.ರೊಟ್ಟಿ, ಸಿಡಿಪಿಒ ಚಂದ್ರಶೇಖರ ಸುಖಸಾರೆ, ಸಿಡಿಪಿಒ ರಾಮಮೂರ್ತಿ, ರೋಟೇರಿಯನ್ ಮನೋಜ್ ಸುತಾರ್, ಅಜಯ್ ಹೆಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶಿವಾಪ್ಪ ಚಂದರಗಿ ಅವರ ಬೀರಸಿದ್ದೇಶ್ವರ್ ಜಾನಪದ ಕಲಾ ತಂಡದಿಂದ ತಾಯಿ ಮಗುವಿನ ಆರೋಗ್ಯದಲ್ಲಿ ಪೋಲಿಯೋ ಲಸಿಕೆಯ ಮಹತ್ವದ ಕುರಿತು ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ಬಸವರಾಜ್ ಯಾಲಿಗಾರ್ ಸ್ವಾಗತಿಸಿದರು. ಸಿ. ಜಿ ಅಗ್ನಿಹೋತ್ರಿ ನಿರೂಪಿಸಿದರು. ಶಿವಾಜಿ ಮಳೆಗೆನ್ನಾವರ್ ವಂದಿಸಿದರು. ಪ್ರಕಾಶ ಮಾನೆ ಮತ್ತು ವಸಂತ್ ಪಾತಾಲಿ, ಕವಿತಾ ಕುಂಬಾರ್ ಕಾರ್ಯಕ್ರಮ ಆಯೋಜಿಸಿ ಸಂಘಟಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ